

ಮೈಸೂರು: ದೇಶದಲ್ಲಿ ಮಾನವ ಸಂಪನ್ಮೂಲ ಹೆಚ್ಚಾಗಿದ್ದು, ಯುವಕರೇ ಭಾರತದ ಭದ್ರ ಬುನಾದಿಯಾಗಿದ್ದಾರೆ ಎಂದು ನೆಹರೂ ಯುವ ಕೇಂದ್ರದ ನಿರ್ದೇಶಕ ಎಂ.ಎನ್. ನಟರಾಜ್ ತಿಳಿಸಿದರು.
ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ವತಿಯಿಂದ ಸೋಮವಾರ ಆಯೋಜಿಸಿದ್ದ ಭಾರತ-ಬಾಂಗ್ಲಾದೇಶ ಸಂಬಂಧಗಳು-ಅಂತಾರಾಷ್ಟ್ರೀಯ ಶಾಂತಿ ಮತ್ತು ತಿಳಿವಳಿಕೆಯ ಪ್ರಚಾರದಲ್ಲಿ ಯುವಜನರ ದೃಷ್ಟಿಕೋನ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ನಮ್ಮದು ಯುವ ಭಾರತ ಎನಿಸಿದ್ದು, ಪ್ರಪಂಚದ ಗಮನ ಸೆಳೆಯುತ್ತಿದೆ. ದೇಶದ 133 ಕೋಟಿ ಜನರಲ್ಲಿ ಯುವ ಸಮುದಾಯದ ಸಂಖ್ಯೆ ಹೆಚ್ಚಾಗಿದೆ. ಯುವ ನೀತಿಯ ಪ್ರಕಾರ 15ರಿಂದ 29 ವರ್ಷದವರನ್ನು ಯುವಜನರು ಎಂದು ಕರೆಯಲಾಗಿದೆ. ಅಂಥವರು ನಮ್ಮಲ್ಲಿ 45 ಕೋಟಿ ಜನರಿದ್ದಾರೆ. ವಿಶ್ವದಲ್ಲಿ ಚೈನಾ ದೇಶ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೂ, ಚೈನಾಕಿಂತಲೂ ಭಾರತದಲ್ಲಿ ಯುವ ಸಮುದಾಯದ ಸಂಖ್ಯೆ ಹೆಚ್ಚಾಗಿದೆ ಎಂದರು.
ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯವು ಯುವಜನ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ವರ್ಷ ಅಂತಾರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಉಭಯ ದೇಶಗಳ ನಡುವೆ ಪರಿಣಾಮಕಾರಿ ಸಂಬಂಧ ವೃದ್ಧಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಪರಸ್ಪರ ಶಾಂತಿ ಮತ್ತು ಸಹೋದರತ್ವವನ್ನು ವೃದ್ಧಿಸುವುದು, ಜತೆಗೆ ಯುವಜನರಿಗೆ ಅಂತಾರಾಷ್ಟ್ರೀಯ ಪರ್ಯಟನೆಗೆ ಅವಕಾಶ ಒದಗಿಸಿಕೊಡುವುದು ಹಾಗೂ ಪರಸ್ಪರ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
102 ಜನ ಇರುವ ಬಾಂಗ್ಲ ದೇಶದ ಯುವಜನ ನಿಯೋಗ ಭಾರತಕ್ಕೆ ಭೇಟಿ ನೀಡಿದ್ದು, ಈಗಾಗಲೇ ದೆಹಲಿ, ಆಗ್ರಾ, ಮೈಸೂರು ಅರಮನೆ, ಚಾಮುಂಡಿ ಬೆಟ್ಟ ಹಾಗೂ ಕೆಆರ್‌ಎಸ್ ಭೇಟಿ ನೀಡಿದೆ. ದೇಶ ಸುತ್ತಬೇಕು ಇಲ್ಲವೇ ಕೋಶ ಓದಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಜಿಲ್ಲೆ, ರಾಜ್ಯ, ದೇಶದ ಮಟ್ಟದಲ್ಲಿ ವಿಚಾರ ವಿನಿಮಯಕ್ಕೆ ಆದ್ಯತೆ ನೀಡುತ್ತಿದೆ. ಈ ಸಂಬಂಧ ಭಾರತದೊಂದಿಗೆ 14 ದೇಶಗಳು ಒಪ್ಪಂದ ಮಾಡಿಕೊಂಡಿವೆ. ಇಂತಹ ವಿನಿಮಯ ಕಾರ್ಯಕ್ರಮಗಳು ಯುವಜನರಿಗೆ ವಿಷಯಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಎನ್‌ಎಸ್‌ಎಸ್-ಇಟಿಐ ಸಂಯೋಜಕ ಪ್ರೊ.ಬಿ.ಚಂದ್ರಶೇಖರ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕೃಷ್ಣಯ್ಯ, ಎನ್‌ಎಸ್‌ಎಸ್ ಪ್ರಾದೇಶಿಕ ನಿದೇಶಕ ಕೆ.ವಿ.ಖಾದ್ರಿ ನರಸಿಂಹಯ್ಯ, ಡೀನ್ ಪ್ರೊ.ಸಿ.ಗುರುಸಿದ್ದಯ್ಯ, ಮೈಸೂರು ವಿವಿ ಅಂತಾರಾಷ್ಟ್ರೀಯ ಕೇಂದ್ರದ ನಿರ್ದೇಶಕ ಪ್ರೊ.ಜಿ.ಆರ್. ಜನಾರ್ದನ್, ನವಶಾದ್, ನೀರಜ್, ಡಾ.ಸುಭಾಷ್ ಇತರರಿದ್ದರು.