

ತುಮಕೂರು: ನೃತ್ಯ ಮತ್ತು ಸಂಗೀತ ವ್ಯಕ್ತಿಯ ಮನೋವಿಕಾಸಕ್ಕೆ ಆರಂಭವಾಗಿದ್ದೇ ಹೊರತು ಮನರಂಜನೆಯ ಉದ್ದೇಶಕ್ಕಾಗಿ ಅಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶುಕ್ರವಾರ ಸಂಸ್ಕಾರ ಭಾರತಿ ವತಿಯಿಂದ ಪ್ರಾಂತ ಶಾಸ್ತ್ರೀಯ ನೃತ್ಯಕಲಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಕಲಾ ಕ್ಷೇತ್ರಕ್ಕೆ ಅಂಟಿಕೊಂಡಿರುವ ಕತ್ತಲೆ ದೂರವಾಗಿಸುವ ಜತೆಗೆ ಕ್ಷೇತ್ರವನ್ನು ಶುದ್ಧಗೊಳಿಸುವ ನಿಟ್ಟಿನಲ್ಲಿ ಸಂಸ್ಕಾರ ಭಾರತಿ ಕೆಲಸ ಮಾಡುತ್ತಿದೆ, ಸಂಗೀತ ಮನಸ್ಸನ್ನು ಮುದಗೊಳಿಸುವ ಕಾರ್ಯ ಮಾಡುತ್ತಿದ್ದು, ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಭರತ ನಾಟ್ಯ ಕಲಾವಿದೆ ಪದ್ಮಶ್ರೀ ಡಾ.ಚಿತ್ರಾ ವಿಶ್ವೇಶ್ವರನ್, ನಟಿ ಮಾಳವಿಕ ಅವಿನಾಶ್, ಪ್ರಾಂತ ಶಾಸ್ತ್ರೀಯ ನೃತ್ಯೋತ್ಸವ ಅಧ್ಯಕ್ಷ ಎಚ್. ಪಿ.ಚಂದ್ರಶೇಖರ್ ಮತ್ತಿತರು ಕಾರ್ಯಕ್ರಮದಲ್ಲಿ ಇದ್ದರು.
ವಿದುಷಿಗಳಾದ ಲಲಿತಾಶ್ರೀನಿವಾಸನ್, ಉಷಾ ದಾತಾರ್, ಸುಜಾತಾ ರಾಜಗೋಪಾಲ್, ಶ್ಯಾಂಪ್ರಕಾಶ್, ವಸುಂಧರಾ ದೊರೆಸ್ವಾಮಿ, ಲಲಿತಾ ರಾಜೇಂದ್ರ, ಭಾನುಮತಿ, ಎಂ.ಆರ್.ಕೃಷ್ಣಮೂರ್ತಿ, ಬಿ.ಎಸ್.ಸುನಂದಾದೇವಿ ಇವರಿಗೆ ‘ನೃತ್ಯ ಕಲಾ ಸಂಸ್ಕಾರ ರತ್ನ’ಬಿರುದು ನೀಡಿ ಗೌರವಿಸಲಾಯಿತು.
ಬಿಎಸ್‌ವೈ ಪಳಗಿದ ರಾಜಕಾರಣಿ: ಮುಖ್ಯಮಂತ್ರಿ ಯಡಿಯೂರಪ್ಪ ಪಳಗಿದ ರಾಜಕಾರಣಿಯಾಗಿದ್ದು, ಅವರನ್ನು ಯಾರೂ ಆಟ ಆಡಿಸಲು ಆಗಲ್ಲ, ಎಲ್ಲರನ್ನೂ ಆಡಿಸುವ ಸಾಮರ್ಥ್ಯ ಅವರಿಗಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು. ಸಂಪುಟ ವಿಸ್ತರಣೆಗೆ ವರಿಷ್ಠರು ಸಿಎಂಗೆ ಕಾಲಾವಕಾಶ ನೀಡದೆ ಆಟ ಆಡಿಸುತ್ತಿದ್ದಾರೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ಕೆಲ ನಿರ್ಧಾರವನ್ನು ಯೋಚನೆ ಮಾಡಿ ತೆಗೆದುಕೊಳ್ಳುವುದರಿಂದ ವಿಳಂಬವಾಗಿದೆ ಎಂದರು.
ಪ್ರಧಾನಿ ಅವರನ್ನು ಗೋಡ್ಸೆಗೆ ಹೋಲಿಸಿದ್ದ ರಾಹುಲ್‌ಗಾಂಧಿ ವಿರುದ್ಧ ಹರಿಹಾಯ್ದ ಸಿಟಿ ರವಿ, ಮುಸಲೋನಿ ಸೈನ್ಯದಲ್ಲಿ ರಾಹುಲ್ ತಾತ ಇದ್ದರು ಎಂದು ಕೇಳಿದ್ದೇನೆ. ಬಹುಶಃ ಆ ಬೆರಕೆಯ ಮನಸ್ಥಿತಿ ಇಲ್ಲಿ ಕಾಣುತ್ತಿದೆ ಎಂದರು. ಕೆಲವರು ಗಾಂಧಿ ಹೆಸರು ಇಟ್ಟುಕೊಂಡು ತಾವು ಮಹಾತ್ಮಗಾಂಧಿ ಎಂಬ ಭ್ರಮೆಯಲ್ಲಿದ್ದಾರೆ, ಗಾಂಧಿ ಹೆಸರು, ವೇಷ ಹಾಕಿಕೊಳ್ಳೋದು ಸುಲಭ, ಅವರಂತಾಗುವುದು ಕಷ್ಟ ಎಂದರು. ದೇಶಕ್ಕೆ ಕಾಂಗ್ರೆಸ್ ಮಾಡಿರುವ ಅನ್ಯಾಯ ಗೋಡ್ಸೆ ಅನ್ಯಾಯವನ್ನೂ ಮೀರಿಸಿದ್ದು, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಕಾಂಗ್ರೆಸ್ ಕೊಡುಗೆಯಾಗಿದ್ದು, ಸ್ವಾತಂತ್ರೃದ ನಂತರ ವಿಸರ್ಜಿಸಬೇಕಾದ ಪಕ್ಷವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗಿದೆ ಎಂದರು. ಪ್ರಧಾನಿ ಆಗುವ ತಿರುಕನ ಕನಸು ಕಾಣುತ್ತಿರುವ ರಾಹುಲ್‌ಗಾಂಧಿ ಹತಾಷರಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದರು
ಪ್ರೀತಿ ಮೂಲಕ ಕಲೆ ಪ್ರದರ್ಶಿಸಿ: ಕಲೆ ಮತ್ತು ಕಲಾವಿದರ ಉನ್ಮನವನ್ನು ಅರ್ಥ ಮಾಡಿಕೊಂಡರೆ ಸಮಾಜ ಕಟ್ಟುವಲ್ಲಿ ಕಲೆ ಹಾಗೂ ಕಲಾವಿದನ ಕರ್ತವ್ಯ ಏನೆಂಬುದು ಅರ್ಥ ಆಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು. ಕಲೆ ಪ್ರತಿಯೊಬ್ಬರ ಮನಸ್ಸನ್ನು ಹದಗೊಳಿಸುವ ಕೆಲಸ ಮಾಡುತ್ತಿದೆ, ಕಲಾವಿದನು ಪ್ರೀತಿಯ ಮೂಲಕ ಕಲೆ ಪ್ರದರ್ಶಿಸಬೇಕು. ಆರೋಗ್ಯ ಸಮಾಜ ನಿರ್ಮಾಣಕ್ಕೆ ಕಲಾವಿದನ ಪಾತ್ರ ಬಹುದೊಡ್ಡದು. ಅದರತ್ತ ನಾವೆಲ್ಲಾರೂ ಸಾಗಬೇಕಾಗಿದೆ. ಶಿಕ್ಷಣದಲ್ಲಿ ಆಗುತ್ತಿರುವ ವ್ಯತ್ಯಾಸ ಸಮಾಜ ಯಾವ ಕಡೆ ಸಾಗುತ್ತಿದೆ ಎಂಬುದರ ಅರಿವು ನಮಗೆ ಬರುತ್ತದೆ. ಮನಸ್ಸನ್ನು ಮುದಗೊಳಿಸುವ ಗುರು, ಶಿಷ್ಯ ಪರಂಪರೆ ಉಳಿಸಿಕೊಂಡು ಹೋಗುವ ಕೆಲಸವಾಗಬೇಕು ಎಂದರು.