

ಮೈಸೂರು: ಮಾನವ ಸಂಬಂಧಗಳನ್ನು ಘನತೆ ಹಾಗೂ ಗೌರವದಿಂದ ಕಾಣಬೇಕು ಎಂಬ ವಿಚಾರದಲ್ಲಿ ಸಾಹಿತಿ ಪ್ರೊ.ಜಿ.ಎಚ್. ನಾಯಕ್ ಎಲ್ಲರಿಗೂ ಮಾದರಿ ಎಂದು ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.
ಮಹಾಜನ ವಿದ್ಯಾಸಂಸ್ಥೆ, ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು, ಅಭಿನವ ಸಂಸ್ಥೆ ವತಿಯಿಂದ ಜಯಲಕ್ಷ್ಮೀಪುರಂ ನ ಮಹಾಜನ ವಿದ್ಯಾಸಂಸ್ಥೆಯ ವಿವೇಕಾನಂದ ಸಭಾಂಗಣದಲ್ಲಿ ಪ್ರೊ.ಜಿ.ಎಚ್. ನಾಯಕ-88 ಮತ್ತು ಕನ್ನಡ ಸಾಹಿತ್ಯ ಮತ್ತು ಜೀವನ ಮೌಲ್ಯಗಳು ವಿಷಯದ ಕುರಿತು ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯವಿಚಾರ ಸಂಕಿರಣದಲ್ಲಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಧ್ವೇಷ, ಅಸಹನೆ ಹೆಚ್ಚಾಗಿ ತುಂಬಿಕೊಂಡಿದ್ದು, ಪ್ರೀತಿಸುವ ಗುಣವನ್ನೇ ಮನುಷ್ಯ ಕಳೆದುಕೊಳ್ಳುತ್ತಿದ್ದಾನೆ. ಪ್ರೀತಿ ಒಂದು ಮೌಲ್ಯ ಎಂದು ಜಿ.ಎಚ್. ನಾಯಕರು ಗಾಢವಾಗಿ ನಂಬಿದರು, ಅಲ್ಲದೆ ಅದೇ ರೀತಿ ಬದುಕಿದರು ಎಂದು ಹೇಳಿದರು.
ನಾಯಕ್ ಮತ್ತೊಬ್ಬರ ನಂಬಿಕೆಯನ್ನು ಗೌರವಿಸುವ ಗುಣ ಹೊಂದಿದ್ದರು. ಮತ್ತೊಬ್ಬರ ನಂಬಿಕೆಯನ್ನು ಗೌರವಿಸುವ ಜತೆಗೆ ತಾವು ನಂಬಿದ ತತ್ವ ಸಿದ್ಧಾಂತಕ್ಕೆ ಅವರು ಬದ್ಧರಾಗಿರುತ್ತಿದ್ದರು. ಇದು ಅವರಲ್ಲಿದ್ದ ಅಪರೂಪದ ಗುಣ. ಅವರು ಎಂದು ಸಹ ಯಾರ ಬಗ್ಗೆಯೂ ಲಘುವಾಗಿ ಮಾತನಾಡಿದ್ದನ್ನು ನಾನು ಕೇಳಿಯೇ ಇಲ್ಲ. ವೇದಿಕೆಯಲ್ಲಿ ಮಾತ್ರವಲ್ಲ ಹೊರಗೂ ಅವರು ಒಂದೇ ರೀತಿಯ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ. ಎನ್. ಬೋರಲಿಂಗಯ್ಯ ಮಾತನಾಡಿ, ಜಿ.ಎಚ್.ನಾಯಕರ ಸಾಹಿತ್ಯದ ಬದುಕನ್ನು ಜೀವಂತವಾಗಿರಿಸಬೇ ಕಾದರೆ ಅವರ ಸಾಹಿತ್ಯ ಮತ್ತು ವಿಮರ್ಶೆಯ ಬಗ್ಗೆ ಹೆಚ್ಚಿನ ಸಂಖ್ಯೆಯ ವಿಚಾರ ಸಂಕಿರಣಗಳು ನಡೆಯಬೇಕು. ದ್ವೇಷ ಬಿಟ್ಟು ಪ್ರೀತಿಯಿಂದ ದೇಶಕಟ್ಟುವ ಮನೋಭಾವವನ್ನು ನಾಯಕರು ಹೊಂದಿದ್ದರು. ಅವರ ಸ್ನೇಹದಲ್ಲಿ ನಿಷ್ಕಲ್ಮಶವಾದ ಪ್ರೀತಿ ಹಾಗೂ ವಾತ್ಸಲ್ಯಪೂರಿತ ಹೃದಯ ಇತ್ತು ಎಂದರು.
ಪ್ರಾಂಶುಪಾಲರಾದ ಡಾ. ಜಯಕುಮಾರಿ, ಲೇಖಕಿ ಮೀರಾ ನಾಯಕ್, ಮಹಾಜನ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಟಿ. ವಿಜಯಲಕ್ಷ್ಮೀ ಮುರಳೀಧರ್, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ, ಅಭಿನವ ಪ್ರಕಾಶನದ ಪ್ರಕಾಶಕ ರವಿಕುಮಾರ್ ಇದ್ದರು.