ಸಾಹಿತ್ಯದಿಂದ ಮಾನವೀಯ ಸಂಬಂಧ ಬೆಸೆಯಲು ಸಾಧ್ಯ

mng_4 oct VV Beary
ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಹಮ್ಮಿಕೊಳ್ಳಾಗಿದ್ದ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮವನ್ನು ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ನಾಗಪ್ಪ ಗೌಡ ಉದ್ಘಾಟಿಸಿದರು.
Published on

ಮಂಗಳೂರು: ಭಾಷೆಯು ಮನುಷ್ಯ ಸೃಷ್ಟಿ. ಸಾಹಿತ್ಯದ ಮೂಲಕ ಮಾನವೀಯ ಸಂಬಂಧಗಳನ್ನು ಬೆಸೆಯಲು ಸಾಧ್ಯವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ನಾಗಪ್ಪ ಗೌಡ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಹಮ್ಮಿಕೊಳ್ಳಾಗಿದ್ದ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ಭಾಷೆಯನ್ನು ಇತರರಿಗೆ ಕಲಿಸುವ ಪ್ರಯತ್ನ ಮಾಡಬೇಕು. ಭಾಷೆಗೆ ಯಾವುದೇ ಜಾತಿ, ಧರ್ಮ ಬೇಧವಿಲ್ಲ. ಪ್ರಾಚೀನ ಕಾಲದಿಂದಲೂ ಅಸ್ಥಿತ್ವದಲ್ಲಿದ್ದು, ಇಂದಿಗೂ ಪ್ರಚಲಿತವಿರುವ ಭಾಷೆಗಳಲ್ಲಿ ಬ್ಯಾರಿ ಭಾಷೆ ಕೂಡ ಒಂದಾಗಿದೆ. ಅಂದಿನ ಕಾಲದಲ್ಲಿ ಕರಾವಳಿಯನ್ನು ಮಿನಿ ಭಾರತ ಎಂದೇ ಗುರುತಿಸಲಾಗುತ್ತಿತ್ತು ಎಂದರು.

ಬ್ಯಾರಿ ಭಾಷೆಯ ಮಾಸಿಕ ಪತ್ರಿಕೆ ಉಪಸಂಪಾದಕ ಮುಹಮ್ಮದ್ ಅಲಿ ಕಮ್ಮರಡಿ, ಮೊದಲು ನಾವು ಭಾಷೆ ಕಲಿತು ಇತರರಿಗೂ ಕಲಿಸಬೇಕು. ಆ ಮೂಲಕ ಭಾಷೆಯನ್ನು ಜೀವಂತವಾಗಿಟ್ಟುಕೊಳ್ಳಲು ಸಾಧ್ಯ. ಎಲ್ಲಾ ಭಾಷೆಗಳಂತೆ ಬ್ಯಾರಿ ಭಾಷೆ ಕೂಡ ಕಲಿಯಲು ಸುಲಭ ಸಾಧ್ಯ. ಭಾಷೆ ಎಲ್ಲರ ಸ್ಪತ್ತಾಗಿದೆ. ಸಮಾಜದಲ್ಲಿ ಬದುಕ ಬೇಕಾದರೆ ಎಲ್ಲಾ ಭಾಷೆಯ ಜ್ಞಾನ ಇರಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಪ್ರೊ. ಅಬೂಬಕ್ಕರ್ ಸಿದ್ಧಿಕ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮ್ಮರ್ ಯು. ಎಚ್., ವಕೀಲ ಬಿ. ಎ. ಮಹಮ್ಮದ್ ಹನೀಫ್, ಬದ್ರಿಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಇಸ್ಮಾಯಿಲ್ ಎನ್., ಎನ್‌ಎಂಪಿಟಿಯ ನಿವೃತ್ತ ಉಪನಿರ್ದೇಶಕ ಖಾಲಿದ್ ತಣ್ಣೀರುಬಾವಿ, ಪತ್ರಕರ್ತ ಬಶೀರ್ ಬೈಕಂಪಾಡಿ ಉಪಸ್ಥಿತರಿದ್ದರು.

--------------

ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕೂಡಿರುವ ಕರಾವಳಿಯಲ್ಲಿ ಉಗಮವಾಗಿರುವ ಬ್ಯಾರಿ ಭಾಷೆಗೆ 1,400 ವರ್ಷಗಳಷ್ಟು ಇತಿಹಾಸವಿದೆ. ಮನುಷ್ಯನ ನಡುವೆ ಬಾಂಧವ್ಯ ಬೆಳೆಸುವ ನಿಟ್ಟಿನಲ್ಲಿ ಬ್ಯಾರಿ ಪೀಠ ಶ್ರಮಿಸುತ್ತಿರುವುದು ಶ್ಲಾಘನೀಯ.

ಪ್ರೊ. ಅಬೂಬಕ್ಕರ್ ಸಿದ್ಧಿಕ್,

ಬ್ಯಾರಿ ಅಧ್ಯಯನ ಪೀಠದ ಸಂಯೋಜಕ, ವಿಶ್ವವಿದ್ಯಾನಿಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net