

ಹುಬ್ಬಳ್ಳಿ: ರೋಟರಿ ಕ್ಲಬ್ ಆ್ ಹುಬ್ಬಳ್ಳಿ ಮಿಡ್ಟೌನ್ ಮತ್ತು ರೋಟರಿ ಕ್ಲಬ್ ಆ್ ಕೊಪೆಲ್ (ಯುಎಸ್ಎ), ರೋಟರಿ ಇಂಟರ್ನ್ಯಾಷನಲ್ ಗ್ಲೋಬಲ್ ಗ್ರಾಂಟ್ ಅಡಿಯಲ್ಲಿ ನಗರದ ಕಿಮ್ಸ್ ಚಿಕ್ಕ ಮಕ್ಕಳ ವಿಭಾಗದಲ್ಲಿ "ಜೀವಾಮೃತ' ಹ್ಯೂಮನ್ ಮಿಲ್ಕ್ ಬ್ಯಾಂಕ್ ಸ್ಥಾಪಿಸಲಾಗಿದೆ ಎಂದು ರೋಟರಿ ಅಧ್ಯಕ್ಷ ರಾಜು ದೊಡ್ಡಮನಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಮ್ಸ್ ತಾಯಿ ಮತ್ತು ಮಗು ವಿಭಾಗದ ನೆಲಮಾಳಿಗೆಯಲ್ಲಿ ಸುಮಾರು 46 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದ್ದು, ಏ. 12ರಂದು ಮಧ್ಯಾಹ್ನ 3ಕ್ಕೆ ಉದ್ಘಾಟನೆ ನೆರವೇರಿಸಲಾಗುವುದು ಎಂದರು.
ಕಿಮ್ಸ್ ಹೊಸ ಓಟಿ ಕಾಂಪ್ಲೆಕ್ಸ್ 5ನೇ ಮಹಡಿಯ ಚಾಲುಕ್ಯ ಹಾಲ್ನಲ್ಲಿ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ರೋಟರಿ ಜಿಲ್ಲಾ ಗವರ್ನರ್ ನಾಸಿರ್ ಬೋರಸದವಾಲ್ ಮತ್ತು ಹಿಂದಿನ ಗವರ್ನರ್ ವೆಂಕಟೇಶ ದೇಶಪಾಂಡೆ, ಕಿಮ್ಸ್ ನಿರ್ದೇಶಕ ಡಾ. ಎಸ್.ಎ್. ಕಮ್ಮಾರ, ಸುರೇಂದ್ರ ಪೋರವಾಲ್, ಕಿಮ್ಸ್ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ, ಡಾ. ವಿನೋದ ರಟಗೇರಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಸ್ತನ್ಯಪಾನ ನವಜಾತ ಶಿಶುಗಳಿಗೆ ಮುಖ್ಯ ಆಹಾರ ನೀಡುವ ವಿಧಾನವಾಗಿದೆ. ತಾಯಿ ಹಾಲು ಅಮೃತ ಸಮಾನ. ಆದರೆ, ಕೆಲವೊಮ್ಮೆ ಹಾಲು ಸಿಗುವುದಿಲ್ಲ. ತಾಯಿ ಹಾಲು ಸಿಗದೇ ಮಗು ಅನಾರೋಗ್ಯದಿಂದ ಬಳಲುವ ಸಾಧ್ಯತೆ ಇದೆ. ತೂಕ ಇಳಿಕೆ, ಅಪೌಷ್ಟಿಕತೆ ಬರುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ತಾಯಿ ಹಾಲು ಕೊಡುವುದಕ್ಕಾಗಿ ಜೀವಾಮೃತ ಸ್ಥಾಪನೆ ಮಾಡಲಾಗಿದೆ.
ದಾನ ಕೊಡುವ ತಾಯಂದಿರ ಹಾಲನ್ನು ಸಂಗ್ರಹಿಸಿ ಇಡಲಾಗುತ್ತದೆ. ಕೆಲವೊಮ್ಮೆ ಹುಟ್ಟಿದ ಕೂಡಲೇ ಕೆಲ ಮಕ್ಕಳಿಗೆ ಕಾಯಿಲೆ ಬರುವುದರಿಂದ ಐಸಿಯುನಲ್ಲಿ ಇಡಬೇಕಾಗುತ್ತದೆ. ಆ ಸಂದರ್ಭದಲ್ಲಿ ಮಗುವಿಗೆ ಹಾಲು ಕೊಡುವುದಿಲ್ಲ. ಆಗ ತಾಯಿಯಿಂದ ಹಾಲು ಸಂಗ್ರಹಿಸಿ ಇಲ್ಲಿ ಇಡಬಹುದು. ಬೇಕೆಂದಾಗ ಮಗುವಿಗೆ ಕುಡಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಮಕ್ಕಳ ತಜ್ಞ ಡಾ. ಪ್ರಕಾಶ ವಾರಿ ಮಾತನಾಡಿ, ಫಾರ್ಮುಲಾ ಹಾಲಿಗೆ ಹೋಲಿಸಿದರೆ ತಾಯಿ ಹಾಲು ಶಿಶುಗಳಿಗೆ ಬಹಳ ಉತ್ತಮ. ಇದರಿಂದ ಅನಾರೋಗ್ಯ ಹಾಗೂ ಅಕಾಲಿಕ ಮರಣ ತಪ್ಪಿಸಬಹುದು. ಪ್ರತಿ ತಿಂಗಳು ಕಿಮ್ಸ್ನಲ್ಲಿ ಸಾವಿರ ಮಕ್ಕಳು ಜನಿಸುತ್ತವೆ. ಇದರಲ್ಲಿ ಶೇ. 30ರಷ್ಟು ಮಕ್ಕಳ ತೊಂದರೆ ಅನುಭವಿಸಿ ಐಸಿಯುನಲ್ಲಿ ಇರುತ್ತದೆ. ಇದಕ್ಕೆ ಜೀವಾಮೃತ ನೆರವಿಗೆ ಬರಲಿದೆ ಎಂದರು.
9 ಲೀಟರ್ ಸಾಮರ್ಥ್ಯದ ಯಂತ್ರೋಪಕರಣ ಸ್ಥಾಪಿಸಲಾಗಿದೆ. ಸದ್ಯ 2-3 ಲೀಟರ್ ಸಂಗ್ರಹವಾಗಲಿದೆ ಎಂದರು. ರೋಟರಿ ಕ್ಲಬ್ ನ ವಾಸುಕಿ ಸಂಜಿ, ಲಿಂಗರಾಜ ಪಾಟೀಲ ಗೋಷ್ಠಿಯಲ್ಲಿದ್ದರು.