ಎಐಗಿಂತ ಮಾನವನ ಬುದ್ಧಿಮತ್ತೆಯೇ ಶ್ರೇಷ್ಠ : ಪೆನ್ಸಿಲ್ವೇನಿಯಾ ವಿವಿ ಪ್ರಾಧ್ಯಾಪಕ ಡಾ. ಕೆ. ಸಂದೀಪ್ ಪ್ರಭು


ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವಿಜ್ಞಾನ ಶೃಂಗಸಭೆಯನ್ನು ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕೆ. ಸಂದೀಪ್ ಪ್ರಭು ಉದ್ಘಾಟಿಸಿದರು. ಡಾ.ಸಿ.ಜಿ.ಬೆಟಸೂರಮಠ,  ಡಾ. ಮುಖೇಶ್ ಕುಮಾರ್, ಡಾ.ಬಿ. ಸುರೇಶ್, ಡಾ.ಎ.ಎನ್. ಸಂತೋಷ್ ಕುಮಾರ್ ಹಾಗೂ ಇತರರು ಇದ್ದರು.
ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವಿಜ್ಞಾನ ಶೃಂಗಸಭೆಯನ್ನು ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕೆ. ಸಂದೀಪ್ ಪ್ರಭು ಉದ್ಘಾಟಿಸಿದರು. ಡಾ.ಸಿ.ಜಿ.ಬೆಟಸೂರಮಠ, ಡಾ. ಮುಖೇಶ್ ಕುಮಾರ್, ಡಾ.ಬಿ. ಸುರೇಶ್, ಡಾ.ಎ.ಎನ್. ಸಂತೋಷ್ ಕುಮಾರ್ ಹಾಗೂ ಇತರರು ಇದ್ದರು.
Published on: 

ಮೈಸೂರು: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಇಂದಿನ ಯುಗದಲ್ಲೂ ಮಾನವನ ಬುದ್ಧಿಮತ್ತೆಯೇ ಶ್ರೇಷ್ಠವಾ ಗಿದ್ದು, ಅದಕ್ಕೆ ತಂತ್ರಜ್ಞಾನದ ವೇಗ ಮತ್ತು ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡಾಗ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕೆ. ಸಂದೀಪ್ ಪ್ರಭು ಅಭಿಪ್ರಾಯಪಟ್ಟರು.

ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವಿಜ್ಞಾನ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆಯನ್ನು ಕೇವಲ ಎಐ ಎಂದು ನೋಡುವ ಬದಲು ‘ವೇಗವರ್ಧಿತ ಬುದ್ಧಿಮತ್ತೆ’ ಎಂದು ಪರಿಗಣಿಸಬಹುದು. ಮಾನವನ ಆಲೋಚನಾ ಶಕ್ತಿ, ಸೃಜನಶೀಲತೆ ಮತ್ತು ವಿವೇಚನೆಗೆ ತಂತ್ರಜ್ಞಾನದ ಸಾಮರ್ಥ್ಯ ಸೇರಿದಾಗ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳು ತೆರೆದುಕೊಳ್ಳಲಿವೆ. ವಿಜ್ಞಾನದಲ್ಲಿರುವ ಮಿತಿಗಳನ್ನು ಮೀರಿ ಮಹತ್ವದ ಸಾಧನೆಗಳನ್ನು ಮಾಡಲು ಇದು ನೆರವಾಗಲಿದೆ ಎಂದರು.

‘ಶಿಕ್ಷಣ ನೀಡಿ, ಉನ್ನತಿಗೇರಿಸಿ ಮತ್ತು ಜ್ಞಾನೋದಯಗೊಳಿಸಿ’ ಎಂಬ ಘೋಷವಾಕ್ಯ ಇಂದಿನ ಕಾಲಘಟ್ಟಕ್ಕೆ ಅತ್ಯಂತ ಸೂಕ್ತವಾಗಿದೆ. ಜ್ಞಾನ ಮತ್ತು ತಂತ್ರಜ್ಞಾನವನ್ನು ಮಾನವ ಕಲ್ಯಾಣಕ್ಕೆ ಬಳಸಿಕೊಳ್ಳುವ ಮೂಲಕ ಸಮಾಜದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಮಾನವನ ಆರೋಗ್ಯ, ಪ್ರಾಣಿಗಳ ಆರೋಗ್ಯ ಮತ್ತು ಪರಿಸರದ ಆರೋಗ್ಯವನ್ನು ಸಮಗ್ರವಾಗಿ ಕಾಪಾಡುವ ನಿಟ್ಟಿನಲ್ಲಿ ವಿಜ್ಞಾನ ಕಾರ್ಯನಿರ್ವಹಿಸಬೇಕು. ಇಂಜಿನಿಯರ್‌ಗಳು, ವೈದ್ಯರು, ಪಶುವೈದ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಅಂತಿಮವಾಗಿ ಮಾನವ ಜೀವನದ ಗುಣಮಟ್ಟ ಸುಧಾರಿಸುವ ಒಂದೇ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ಕ್ಷೇತ್ರಗಳನ್ನು ಒಗ್ಗೂಡಿಸುವ ಸಮಗ್ರ ಪರಿಕಲ್ಪನೆಯೇ ‘ಒನ್ ಹೆಲ್ತ್’ ಎಂದು ವಿವರಿಸಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರಗತಿಯ ಬದಲಾವಣೆಗಳು ನಡೆಯುತ್ತಿದ್ದು, ಜಾಗತಿಕ ಮಟ್ಟದಲ್ಲಿ ಹೊಸ ಆವಿಷ್ಕಾರಗಳು ಮತ್ತು ಸಂಶೋಧನೆಗಳು ಮಾನವ ಜೀವನದ ಮೇಲೆ ಮಹತ್ವದ ಪ್ರಭಾವ ಬೀರುತ್ತಿವೆ ಎಂದರು.

ಜೀನ್ ಎಡಿಟಿಂಗ್, ಕೃತಕ ಬುದ್ಧಿಮತ್ತೆ ಮತ್ತು ಬಾಹ್ಯಾಕಾಶ ಅನ್ವೇಷಣೆಯಂತಹ ಅತ್ಯಾಧುನಿಕ ತಂತ್ರಜ್ಞಾನಗಳು ವಿಜ್ಞಾನದ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿವೆ. ವಿವಿಧ ವಿಜ್ಞಾನ ವಿಭಾಗಗಳ ನಡುವಿನ ಸಹಯೋಗ ಹಾಗೂ ಜಾಗತಿಕ ಮಟ್ಟದ ಸಂಶೋಧನಾ ಪಾಲುದಾರಿ ಕೆಗಳು ಈ ಬೆಳವಣಿಗೆಗೆ ವೇಗ ನೀಡುತ್ತಿವೆ ಎಂದು ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯೊಂದಿಗೆ ನೈತಿಕ ಹೊಣೆಗಾರಿಕೆ, ಹವಾಮಾನ ಬದಲಾವಣೆ ಹಾಗೂ ವೈಜ್ಞಾನಿಕ ಸಂಶೋಧನೆಗಳ ಸಮರ್ಪಕ ಬಳಕೆಯ ಸವಾಲುಗಳೂ ಎದುರಾಗಿವೆ. ವೈಜ್ಞಾನಿಕ ಸಂಶೋಧನೆ ಮತ್ತು ಅದರ ಅನ್ವಯಗಳು ಮಾನವ ಕಲ್ಯಾಣವನ್ನು ಮುಖ್ಯ ಉದ್ದೇಶವಾಗಿಟ್ಟುಕೊಳ್ಳಬೇಕು. ವಿಜ್ಞಾನವು ಶಾಂತಿಗೆ ಪೂರಕವಾಗಿ, ಸಂಘರ್ಷಗಳಿಗೆ ಪರಿಹಾರವಾಗಿ ರೂಪುಗೊಳ್ಳಬೇಕು. ಅಲ್ಲದೆ, ಸಮಾಜದ ಅಭಿವೃದ್ಧಿ ಮತ್ತು ಮಾನವನ ಮೂಲ ಅಗತ್ಯಗಳ ಪೂರೈಕೆಗೆ ಪೂರಕವಾಗಿರಬೇಕು. ಪ್ರಸ್ತುತ ಹಾಗೂ ಭವಿಷ್ಯದ ಪೀಳಿಗೆಗೆ ಉತ್ತಮ ಗುಣಮಟ್ಟದ ಜೀವನ ಒದಗಿಸುವ ನಿಟ್ಟಿನಲ್ಲಿ ವೈಜ್ಞಾನಿಕ ಜ್ಞಾನ ಬಳಕೆಯಾಗಬೇಕು ಎಂದು ಹೇಳಿದರು.

ವಿಜ್ಞಾನಿಗಳ ಶಿಕ್ಷಣ ಮತ್ತು ತರಬೇತಿಯಲ್ಲಿ ನೈತಿಕತೆ ಹಾಗೂ ಜವಾಬ್ದಾರಿಯುತ ಸಂಶೋಧನೆಗೆ ಆದ್ಯತೆ ನೀಡಬೇಕು. ಯುವ ವಿಜ್ಞಾನಿಗಳು ವೈಜ್ಞಾನಿಕ ಸಂಶೋಧನೆಯ ಮೂಲ ನೈತಿಕ ತತ್ವಗಳನ್ನು ಗೌರವಿಸುವಂತೆ ಪ್ರೋತ್ಸಾಹಿಸಬೇಕು. ವಿಜ್ಞಾನದ ಬೆಳವಣಿಗೆಯ ಜತೆಗೆ ಮಾನವ ಘನತೆ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಯೂ ಮುಖ್ಯವಾಗಬೇಕು ಎಂದರು.

ಸಹಯೋಗ, ಆವಿಷ್ಕಾರ, ಅನ್ವೇಷಣೆ ಮತ್ತು ಪರಿಣಾಮ ಎಂಬ ಆಶಯದೊಂದಿಗೆ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ವಿಜ್ಞಾನ ಶೃಂಗಸಭೆ ಆಯೋಜಿಸಿರುವುದು ಸಂತಸದ ಸಂಗತಿ. ವಿವಿಧ ವಿಜ್ಞಾನ ವಿಭಾಗಗಳ ತಜ್ಞರನ್ನು ಒಂದೇ ವೇದಿಕೆಗೆ ತರುವ ಮೂಲಕ ಜ್ಞಾನ ವಿನಿಮಯ, ಸಂಶೋಧನಾ ಸಹಭಾಗಿತ್ವ ಮತ್ತು ಸಮಾಜದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುವ ಆವಿಷ್ಕಾರಗಳಿಗೆ ಈ ಶೃಂಗಸಭೆ ಅವಕಾಶ ಕಲ್ಪಿಸಿದೆ ಎಂದರು.

ಅಮೆರಿಕ, ಪೋಲೆಂಡ್, ದಕ್ಷಿಣ ಆಫ್ರಿಕಾ, ಥಾಯ್ಲೆಂಡ್, ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಹಾಗೂ ಶಿಕ್ಷಣ ತಜ್ಞರು ಭಾಗವಹಿಸಿರುವುದು ವಿಶೇಷ. ಶೃಂಗಸಭೆಯಲ್ಲಿ 600 ಪ್ರತಿನಿಧಿಗಳು ಭಾಗವಹಿಸಿದ್ದು, 14 ರಾಷ್ಟ್ರೀಯ ಮತ್ತು ಐವರು ಅಂತಾರಾಷ್ಟ್ರೀಯ ತಜ್ಞರು ಸೇರಿದಂತೆ 19 ಆಹ್ವಾನಿತ ಭಾಷಣಕಾರರು ಪಾಲ್ಗೊಂಡಿದ್ದಾ ರೆ. 20 ತಾಂತ್ರಿಕಗೋಷ್ಠಿಗಳು, 116 ಮೌಖಿಕ ಪ್ರಬಂಧ ಮಂಡನೆಗಳು, 51 ಭಿತ್ತಿಪತ್ರ ಪ್ರಸ್ತುತಿಗಳು ಹಾಗೂ ನಾಲ್ಕು ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾಜಿ ಮುಖ್ಯಸ್ಥ ಡಾ. ಮುಖೇಶ್ ಕುಮಾರ್, ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಬಿ. ಸುರೇಶ್, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಕುಲಪತಿ ಡಾ.ಎ.ಎನ್. ಸಂತೋಷ್ ಕುಮಾರ್, ಕುಲಸಚಿವ ಡಾ.ಎಸ್.ಎ. ಧನರಾಜ್, ಡೀನ್ ಡಾ.ಎಂ.ಎನ್. ನಾಗೇಂದ್ರ ಪ್ರಸಾದ್, ಎಸ್‌ಜೆಸಿಇ ಪ್ರಾಂಶುಪಾಲ ಡಾ.ಸಿ. ನಟರಾಜು ಇದ್ದರು.