ಷಟ್‌ಸ್ಥಲದಿಂದ ಮಾನವನ ಸಂಪೂರ್ಣ ವಿಕಾಸ

SHATSTHALA
Published on

ಮುಂಡರಗಿ: ವೀರಶೈವ ಸಿದ್ಧಾಂತದಲ್ಲಿ ಅಷ್ಟಾವರಣ ಅವಿಭಾಜ್ಯವಾದರೆ, ಪಂಚಾಚಾರಗಳು ಪ್ರಾಣ ಸ್ವರೂಪವನ್ನು ಹೊಂದಿವೆ. ಷಟ್‌ಸ್ಥಲವು ಜೀವನ ಸಿದ್ಧಾಂತವೆನಿಸಿದೆ. ಅಷ್ಟಾವರಣ-ಪಂಚಾಚಾರಗಳ ಮೂಲಕ ಷಟ್‌ಸ್ಥಲಗಳನ್ನು ಅಳವಡಿಸಿಕೊಳ್ಳಬೇಕು. ಮಾನವನ ಸಂಪೂರ್ಣ ವಿಕಾಸ ಷಟ್‌ಸ್ಥಲದಿಂದಲೂ ಸಾಧ್ಯವಾಗುತ್ತದೆ ಎಂದು ಲಿಂಗನಾಯಕನಹಳ್ಳಿಯ ಶ್ರೀ ಚನ್ನವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳವರ 155ನೇ ಯಾತ್ರಾಮಹೋತ್ಸವ ನಿಮಿತ್ತ ಗುರುವಾರ ಜರುಗಿದ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಷಟ್‌ಸ್ಥಲವು ಭಕ್ತನಿಂದ-ಮಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯವೆಂದು ಆರು ತರನಾಗಿ ಇರುವುದು. ಷಟ್‌ಸ್ಥಲದಲ್ಲಿ ಧರ್ಮ, ಸಂಸ್ಕೃತಿ, ಆಚಾರ-ವಿಚಾರ, ಸಾಧನೆ-ಸಿದ್ದಿಗಳ ಸಮ್ಮಿನಲವಿದೆ. ಭಕ್ತನಾಗಿ ಗುರು-ಜಂಗಮ ಸೇವಾಸಕ್ತನಾಗಬೇಕು. ಮಹೇಶನು ಗುರುಲಿಂಗದಲ್ಲಿ ಶ್ರದ್ಧೆ-ನಿಷ್ಠೆಗಳನ್ನು ಗಟ್ಟಿಗೊಳಿಸಿಕೊಳ್ಳಬೇಕು. ಪ್ರಸಾದಿಯಾದವನು ಸಾವಧಾನದಿಂದ ಪ್ರಸಾದವನ್ನು ಶಿವಪ್ರಸಾದಗೊಳಿಸಬೇಕು. ಪ್ರಾಣಲಿಂಗಿಯು ಲಿಂಗವೇ ಪ್ರಾಣವೆಂದು ಭಾವಿಸುವನು ಎಂದು ಹೇಳಿದರು.

ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಸಾನ್ನಿಧ್ಯ ವಹಿಸಿದ್ದರು. ಶ್ರೀಮಠದ ಉತ್ತರಾಧಿಕಾರಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಹೊಳಲದ ಚನ್ನಬಸವ ದೇವರು, ಚನ್ನವೀರಯ್ಯ ಹಿರೇಮಠ, ನಾಗಭೂಷಣ ಹಿರೇಮಠ, ಮಹಾಲಿಂಗಯ್ಯ ಹಿರೇಮಠ ಮತ್ತು ಹಾಲಯ್ಯ ಹಿರೇಮಠ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು. ನಂತರ ರಥೋತ್ಸವದ ಕಳಸಾರೋಹಣ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

ಯಾತ್ರಾ ಮಹೋತ್ಸವ ಕಮಿಟಿ ಅಧ್ಯಕ್ಷ ವಿ.ಜೆ. ಹಿರೇಮಠ, ಉಪಾಧ್ಯಕ್ಷ ದೇವು ಹಡಪದ, ಕಾರ್ಯದರ್ಶಿ ಶಿವು ನಾಡಗೌಡ್ರ, ಸಹ ಕಾರ್ಯದರ್ಶಿ ಶಿವು ವಾಲಿಕಾರ, ಖಜಾಂಚಿ ನಾಗರಾಜ ಮುರಡಿ, ರಾಮಸ್ವಾಮಿ ಹೆಗ್ಗಡಾಳ, ಕರಬಸಪ್ಪ ಹಂಚಿನಾಳ, ಕಾಂತರಾಜ ಹಿರೇಮಠ, ದೇವಪ್ಪ ಇಟಗಿ, ಸಂಗಣ್ಣ ಲಿಂಬಿಕಾಯಿ, ಶರಣಪ್ಪ ಬೆಲ್ಲದ, ಡಾ. ಡಿ.ಸಿ. ಮಠ, ಎನ್.ಎಫ್. ಅಕ್ಕೂರ, ವೀರೇಶ ಸಜ್ಜನರ, ಡಾ. ಐ.ಎಸ್. ಸರ್ವೀ, ಜಿ.ಕೆ. ಕೊಳ್ಳಿಮಠ, ರಂಗಪ್ಪ ಕೋಳಿ, ಜ.ಅ. ಅಕ್ಕನ ಬಳಗದವರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net