ತಿ.ನರಸೀಪುರದಲ್ಲೂ ಮಾನವ ಸರಪಳಿ ರಚನೆ ಸಾಕಾರ

15 sep tnp 03
ತಿ.ನರಸೀಪುರದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯ ಬಳಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಭಾನುವಾರ ನಡೆದ ಮಾನವ ಸರಪಳಿ ನಿರ್ಮಾಣದಲ್ಲಿ ಪುರಸಭೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
Published on

ತಿ.ನರಸೀಪುರ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಹಿನ್ನೆಲೆಯಲ್ಲಿ ಭಾನುವಾರ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವಕ್ಕಾಗಿ ಹಮ್ಮಿಕೊಂಡಿದ್ದ ಬೃಹತ್ ಮಾನವ ಸರಪಳಿ ನಿರ್ಮಾಣ ನರಸೀಪುರ ತಾಲೂಕಿನಲ್ಲಿಯೂ ಯಶಸ್ವಿಯಾಯಿತು.

ಸರ್ಕಾರದ ಸೂಚನೆಯಂತೆ ಬನ್ನಿ ಪ್ರಜಾಪ್ರಭುತ್ವಕ್ಕಾಗಿ ಕೈ ಜೋಡಿಸೋಣವೆಂಬ ತಾಲೂಕು ಆಡಳಿತದ ಕರೆಗೆ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘಸಂಸ್ಥೆ ಸದಸ್ಯರು, ಮುಖಂಡರು, ಹೋರಾಟಗಾರರು ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿ ಬೀದರ್‌ನಿಂದ ಗಡಿನಾಡು ಚಾಮರಾಜನಗರದವರೆಗಿನ ಅತಿ ಉದ್ದದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮವನ್ನು ಸಾಕಾರಗೊಳಿಸಿದರು.
ತಾಲೂಕು ಆರಂಭಗೊಳ್ಳುವ ಹಳೇ ಕೆಂಪಯ್ಯನಹುಂಡಿ ಗ್ರಾಮದಿಂದ ನೆರೆಯ ಚಾಮರಾಜನಗರ ತಾಲೂಕಿನ ಗಡಿ ಮೂಗೂರು ಗ್ರಾಮದವರೆಗೆ ಮಾನವ ಸರಪಳಿ ನಿರ್ಮಾಣವಾಗಿತ್ತು. ಕೆಂಪಯ್ಯನಹುಂಡಿ ಗ್ರಾಮದಲ್ಲಿ ರಂಗೋಲಿ ಬಿಡಿಸಿ, ಸಂವಿಧಾನ ಪೀಠಿಕೆ ಪ್ರದರ್ಶಿಸಿ, ರಾಷ್ಟ್ರಧ್ವಜಗಳನ್ನ ಹಿಡಿದು ವಿದ್ಯಾರ್ಥಿಗಳು ಸಂಭ್ರಮಪಟ್ಟರು. ನರಸೀಪುರ ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಬಳಿ ಎಲ್ಲರೂ ಮಾನವ ಸರಪಳಿ ನಿರ್ಮಿಸಿದರು.

ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜು, ಸಮಾಜ ಕಲ್ಯಾಣಾಧಿಕಾರಿ ರಾಮೇಗೌಡ, ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ, ಲೋಕೋಪಯೋಗಿ ಎಇಇ ಸತೀಶ್ ಚಂದ್ರ, ಪುರಸಭೆ ಅಧ್ಯಕ್ಷ ವಸಂತ ಶ್ರೀಕಂಠ, ಸದಸ್ಯರಾದ ರೂಪಶ್ರೀ, ಬಾದಾಮಿ ಮಂಜು, ಸಿ.ಪ್ರಕಾಶ್, ಆರ್.ನಾಗರಾಜು, ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ, ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕಿ ಲತಾ ಜಗದೀಶ್, ಸಹಾಯಕ ತೋಟಗಾರಿಕೆ ನಿರ್ದೇಶಕಿ ಶಾಂತಾ, ಸಿಡಿಪಿಒ ಗೋವಿಂದ, ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು, ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net