

ರಾಯಚೂರು: ನಗರದ ಅಂಬೇಡ್ಕರ್ ವೃತ್ತದಲ್ಲಿ ಸೌಹಾರ್ದ ಕರ್ನಾಟಕ, ಸಮಾನ ಮನಸ್ಕರ ವೇದಿಕೆ, ಸಿಐಟಿಯು ಮತ್ತು ಪ್ರಗತಿಪರ ಸಂಘಟನೆಗಳಿಂದ ಮಂಗಳವಾರ ಮಾನಸ ಸರಪಳಿ ರಚಿಸಿ ಸೌಹಾರ್ದ ಸಂದೇಶ ಸಾರುವ ಪ್ರತಿಜ್ಞೆ ಸ್ವೀಕರಿಸಲಾಯಿತು.
ದೇಶದಲ್ಲಿ ಸೌಹಾರ್ದತೆಯ ಗಟ್ಟಿ ಪರಂಪರೆಯಿದ್ದು, ಪ್ರಾಚೀನ ಕಾಲದಿಂದ ಇಂದಿನ ಆಧುನಿಕ ಕಾಲದವರೆಗೆ ಸೌಹಾರ್ದ ಪರಂಪರೆಯು ಸಂಕುಚಿತ ಸವಾಲುಗಳನ್ನು ಮೆಟ್ಟಿ ಮುಂದುವರೆಯುತ್ತಾ ಬಂದಿದೆ. ವಿವಿಧ ಧರ್ಮಗಳ ಜನರ ನಡುವೆ ಭಾವನಾತ್ಮಕ ಬೇಸುಗೆಯಾಗಿದ್ದ ಸೌಹಾರ್ದ ಸಂವೇದನೆಗೆ ಧಕ್ಕೆ ತರಲು ಪ್ರಯತ್ನಿಸುವುದನ್ನು ವಿರೋಸಬೇಕು.
ದೇಶದಲ್ಲಿ ಕೆಲವು ಹಿತಾಸಕ್ತಿಗಳು ಧರ್ಮದ ಹೆಸರಿನ್ಲಲಿ ಜನಸಮುದಾಯದ ನಡುವೆ ಕಂದಕ ಮೂಡಿಸುತ್ತಾ ಕಲುಷಿತ ವಾತಾವರಣಕ್ಕೆ ಕಾರಣವಾಗುತ್ತಿರುವಾಗ ಜನಸಮುದಾಯಕ್ಕೆ ಸತ್ಯವನ್ನು ಮನವರಿಕೆ ಮಾಡಿ ಕೊಡುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ.
ಸಂವಿಧಾನದಲ್ಲಿರುವ ಧಾರ್ಮಿಕ ಸ್ವಾತಂತ್ರ ಮತ್ತು ಸಮಾನತೆಯ ಅಂಶಗಳನ್ನು ಸೌಹಾರ್ದದ ಸಕಾರಾತ್ಮಕ ಸಾಧನವಾಗಿ ಜನರಿಗೆ ಮನವರಿಕೆ ಮಾಡಿಕೊಡುವುದು ಅಗತ್ಯವಾಗಿದೆ. ಧರ್ಮ ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವವರ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಲು ಎಲ್ಲರೂ ಮುಂದಾಗಬೇಕು ಎಂದು ಪ್ರತಿಜ್ಞಾವಿ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಸಾಹಿತಿ ವೀರಹನುಮಾನ, ವಿವಿಧ ಸಂಘಟನೆಗಳ ಪದಾಕಾರಿಗಳಾದ ಚಾಮರಸ ಮಾಲಿಪಾಟೀಲ್, ಕರಿಯಪ್ಪ ಅಚ್ಚೊಳ್ಳಿ, ಎಚ್.ಪದ್ಮಾ, ಕೆ.ಜಿ.ವೀರೇಶ, ಡಿ.ಎಸ್.ಶರಣಬಸವ, ಪ್ರವೀಣರೆಡ್ಡಿ ಗುಂಜಳ್ಳಿ, ಬಷೀರ್ ಅಹ್ಮದ್ ಹೊಸಮನಿ, ಖಾಜಾ ಅಸ್ಲಂ ಅಹ್ಮದ್, ಸುಲೋಚನಾ, ಜಾನ್‌ವೆಸ್ಲಿ, ವೆಂಕಟೇಶ ಬೇವಿನಬೆಂಚಿ, ಗೋಕರಮ್ಮ, ಶಿವಕುಮಾರ ಯಾದವ್ ಉಪಸ್ಥಿತರಿದ್ದರು.