ಶಿರೂರಿನಿಂದ ಹೆಜಮಾಡಿವರೆಗೆ ಬೃಹತ್​ ಮಾನವ ಸರಪಳಿ

udp-dc
Published on

ಉಡುಪಿ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೆ. 15 ರಂದು ಬೆಳಗ್ಗೆ 9.30ರಿಂದ ಜಿಲ್ಲೆಯ ಗಡಿಭಾಗ ಬೈಂದೂರು ತಾಲೂಕಿನ ಶಿರೂರು ಗ್ರಾಮದಿಂದ ಕಾಪು ತಾಲೂಕಿನ ಹೆಜಮಾಡಿ ಗ್ರಾಮದವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರು ಬೃಹತ್​ ಮಾನವ ಸರಪಳಿ ನಿರ್ಮಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.

ಮಣಿಪಾಲ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ್ದು, 34 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 107 ಕಿ.ಮೀ. ರವರೆಗೆ ಮಾನವ ಸರಪಳಿ ಹಾದುಹೋಗಲಿದೆ. ಸಾರ್ವಜನಿಕರು, ಶಾಲಾ&ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಲಿದ್ದಾರೆ ಎಂದರು.

ಮಾನವ ಸರಪಳಿ ನಿಮಾರ್ಣಕ್ಕೆ ಪ್ರತಿ 100 ಮೀ. ಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಕಿನ್ನಿಮೂಲ್ಕಿಯಲ್ಲಿ ಜನಪ್ರತಿನಿಧಿಗಳು, ಸಚಿವರು, ಸಂಸದರು, ಶಾಸಕರು ಸೇರಿಕೊಳ್ಳಲಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯಿಂದ ಭಾಗವಹಿಸಿದ ಎಲ್ಲರಿಗೂ ಸಿಹಿ ತಿಂಡಿ ವಿತರಿಸಲಾಗುವುದು. ಆರೋಗ್ಯ ಇಲಾಖೆ 12 ಆ್ಯಂಬುಲೆನ್ಸ್​ಗಳನ್ನು ನಿಯೋಜಿಸಲಿದೆ. ರಾಷ್ಟ್ರೀಯ ಹೆದ್ದಾರಿ ಬೀಚ್​ ಬದಿಯಲ್ಲಿ ಮಾನವ ಸರಪಳಿ ನಿರ್ಮಿಸಲಾಗುತ್ತಿದ್ದು, ಒನ್​ ವೇ ಟ್ರಾಫಿಕ್​ ವ್ಯವಸ್ಥೆ ಇರಲಿದೆ ಎಂದರು.

ಸ್ವಚ್ಛತಾ ಹೀ ಸೇವಾ
ಕೇಂದ್ರ ಸರ್ಕಾರದ ನಿರ್ದೇಶನದಂತೆ ಸೆ.14ರಿಂದ ಅ.1ರವರೆಗೆ ಸ್ವಚ್ಛತಾ ಹೀ ಸೇವಾ ಅಭಿಯಾನ ನಡೆಯಲಿದ್ದು, ರಸ್ತೆ ಬದಿ ಗಿಡನೆಡುವುದು, ಸಾರ್ವಜನಿಕ ಶೌಚಾಲಯ ದುರಸ್ತಿಗೊಳಿಸಿ ಬಳಕೆಗೆ ಯೋಗ್ಯಗೊಳಿಸುವುದು, 98 ಕಿಮೀ ಕಡಲ ತೀರ ಸ್ವಚ್ಛತೆ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಜಿಪಂ ಯೋಜನಾಧಿಕಾರಿ ಡಾ. ಉದಯ್​ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net