ಕಡಂಗದಲ್ಲಿ ಮಾನವ ಸರಪಳಿ ನಿರ್ಮಿಸಿ ಹಕ್ಕೊತ್ತಾಯ ಮಂಡನೆ

cnc
Published on

ಮಡಿಕೇರಿ: ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ ನೀಡಿರುವ ಸಂಘ ವರ್ಚುವಲ್, ಅಮೂರ್ತ(ಅದೃಶ್ಯ) ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರಿಗೆ ಕೂಡ ವಿಶೇಷ ಪ್ರಾತಿನಿಧ್ಯ ಅಥವಾ ಪರ್ಯಾಯವಾಗಿ ಪ್ರತ್ಯೇಕ ಲೋಕಸಭೆ ಮತ್ತು ವಿಧಾನಸಭೆಯ ಕೊಡವ ಮತ ಕ್ಷೇತ್ರವನ್ನು ರಚಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಡಂಗದಲ್ಲಿ ಗುರುವಾರ ಮಾನವ ಸರಪಳಿ ರಚಿಸಿ ಹಕ್ಕೊತ್ತಾಯವನ್ನು ಮಂಡಿಸಿತು.

ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸಬೇಕು. ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಘೋಷಿಸಬೇಕು. ಎಸ್‌ಟಿ ಟ್ಯಾಗ್ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಪರ ಘೋಷಣೆಗಳನ್ನು ಕೂಗಿದ ಸಿಎನ್‌ಸಿ ಸದಸ್ಯರು ಆದಿಮಸಂಜಾತ ಕೊಡವರ ಪ್ರಗತಿ ಹಾಗೂ ರಕ್ಷಣೆಗಾಗಿ ಸಂವಿಧಾನಬದ್ಧ ಹಕ್ಕುಗಳನ್ನು ಸರ್ಕಾರ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಕೊಡವರು ಬೇರೆಯೇ ರೇಸ್/ ಮೂಲ ವಂಶಸ್ಥ ಜನಾಂಗವಾಗಿದ್ದು, ಅವರ ಸ್ವತಂತ್ರ ಅಸ್ತಿತ್ವ ಮತ್ತು ವ್ಯಕ್ತಿತ್ವವನ್ನು ಗುರುತಿಸಿ ೧೮೭೧-೭೨ರಿಂದ ೧೯೩೧ರ ವರೆಗೆ ನಡೆಸಿದ ಜನಗಣತಿಯನ್ನು ಪುನರ್ ಮಾನದಂಡಗೊಳಿಸಿ ಕೊಡವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಪ್ರತಿಯೊಂದು ಕುಟುಂಬದಲ್ಲಿ ಒಬ್ಬರಂತೆ ಸೇನೆಗೆ ಸೇರುವ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಕೊಡವರು ಕಾಪಾಡುತ್ತಿದ್ದಾರೆ. ಕಟ್ಟುನಿಟ್ಟಾದ ಕುಟುಂಬ ಯೋಜನೆಯ ಪಾಲನೆಯ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಕೊಡವರು ಮಹತ್ವದ ಪಾತ್ರ ವಹಿಸಿದ್ದಾರೆ. ಆದಿಮಸಂಜಾತ ಕೊಡವ ಸಮುದಾಯ ನೀಡಿರುವ ಮತ್ತು ನೀಡುತ್ತಿರುವ ವಿಶಿಷ್ಟ್ಟ ಕೊಡುಗೆಗಳನ್ನು ಸರ್ಕಾರ ಪರಿಗಣಿಸಬೇಕು. ವಿಶೇಷವಾಗಿ ಅತೀ ಸಣ್ಣ ಕೊಡವ ಜನಾಂಗದ ವಿಚಾರದಲ್ಲಿ ಜನಸಂಖ್ಯೆಯು ಕ್ಷೇತ್ರ ಮರುವಿಂಗಡಣೆಗೆ ಏಕೈಕ ಮಾನದಂಡವಾಗಿರಬಾರದು ಎಂದರು.

ಕೊಡವ ಸಮುದಾಯ ಕೊಡವಲ್ಯಾಂಡ್‌ಗೆ ಸೀಮಿತವಾದ ಒಂದು ವಿಶಿಷ್ಟ ಜನಾಂಗವಾಗಿದೆ. ಕೊಡವಲ್ಯಾಂಡ್ ಕೊಡವರ ಸಾಂಪ್ರದಾಯಿಕ ಮತ್ತು ಪೂರ್ವಜರ ತಾಯ್ನಡಾಗಿದೆ. ವಿಶಿಷ್ಟ ಜನಾಂಗೀಯ ಗುಂಪಾದ ಕೊಡವರ ಸೂಕ್ತ ಸ್ಥಾನವನ್ನು ಕಸಿದುಕೊಂಡ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಬೇಕು. ಕೊಡವರನ್ನು ಮೂಲ ವಂಶಸ್ಥ ಕೊಡವ ಸಮುದಾಯಕ್ಕೆ ಸೀಮಿತಗೊಳಿಸಿದ ಏಕ ಮತ್ತು ವಿಭಿನ್ನ ಜನಾಂಗೀಯ ಗುಂಪು ಎಂದು ಗುರುತಿಸಬೇಕು. ಕೊಡವರಿಗೆ ಸಂಬಂಧಿಸಿದಂತೆ ಜಾತಿಯ ಯಾವುದೇ ಉಲ್ಲೇಖವನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಟ್ಟಚೆರುವಂಡ ಸ್ವಪ್ನ, ಕುಮಾರಿ ಪಟ್ಟಚೆರುವಂಡ ಪ್ರಗತಿ ಪೊನ್ನಣ್ಣ, ಕೋಡಿರ ದಿನಾ ಪೊನ್ನಮ್ಮ, ಪಾಂಡಂಡ ಕಿಟ್ಟು, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಕೋಡಿರ ವಿನೋದ್ ನಾಣಯ್ಯ, ನೆರ್ಪಂಡ ಹರ್ಷ, ನೆರ್ಪಂಡ ಜಿಮ್ಮಿ, ಉದಿಯಂಡ ಚಂಗಪ್ಪ, ಸೊಮೆಯಂಡ ರೇಷ ತಮ್ಮಯ್ಯ, ಬಲ್ಲಚಂಡ ರವಿ, ಪಾಂಡಂಡ ಸುಧೀರ್, ಕೋಡಿರ ಪೂಕುಞಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net