ಹೆದ್ದಾರಿಯಲ್ಲಿ ಮಾನವ ಸರಪಳಿ ರಚನೆ

UDP-14-1-Sarapali
ಬನ್ನಂಜೆ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಬಾವುಟವನ್ನು ರೋಲಿಂಗ್​ ಮಾಡುತ್ತಿರುವುದು.
Published on

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ | ಜೈಹಿಂದ್​-ಕರ್ನಾಟಕ ಘೋಷಣೆ

ಪ್ರಶಾಂತ ಭಾಗ್ವತ, ಉಡುಪಿ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ರಾಜ್ಯಾದ್ಯಂತ ಇಂದು (ಸೆ.15) ಮಾನವ ಸರಪಳಿ ರಚಿಸಲಾಗುತ್ತಿದ್ದು, ಉಡುಪಿಯಲ್ಲಿ ಈ ಕಾರ್ಯಕ್ರಮವನ್ನು ಅತ್ಯಾಕರ್ಷಣೆಗೊಳಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಪ್ರಜಾಪ್ರಭುತ್ವದ ಕುರಿತು ಜಾಗೃತಿ ಮೂಡಿಸುವ ಈ ಕಾರ್ಯಕ್ರಮದಲ್ಲಿ ಸುಮಾರು 500 ಮೀಟರ್​ ಉದ್ದದ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜವನ್ನು ಪ್ರದರ್ಶಿಸುವ ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬನ್ನಂಜೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ವಾರ್ಡನ್​ ಸುಚಿತ್ರಾ ಅವರ ಮೇಲುಸ್ತುವಾರಿಯಲ್ಲಿ ಬಾವುಟಗಳನ್ನು ರಚಿಸಲಾಗಿದೆ.

UDP-14-1D-Sarapali
ಬನ್ನಂಜೆ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಕನ್ನಡ ಧ್ವಜವನ್ನು ರೋಲಿಂಗ್​ ಮಾಡುತ್ತಿರುವುದು.

100 ಕಿ.ಮೀ ಮಾನವ ಸರಪಳಿ

ಬೆಳಗ್ಗೆ 9:30ಕ್ಕೆ ಉಡುಪಿ ಜಿಲ್ಲೆಯ ಗಡಿಭಾಗಗಳಾದ ಬೈಂದೂರಿನ ಶಿರೂರು ಟೋಲ್​ ಗೇಟ್​ನಿಂದ ಹೆಜಮಾಡಿ ಸೇತುವೆ ವರೆಗಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ (100 ಕಿ.ಮೀ) ಮಾನವ ಸರಪಳಿ ರಚಿಸಲಾಗುತ್ತಿದೆ. ಮಹಿಳೆಯರು, ಮಕ್ಕಳು, ವಿಶೇಷ ಚೇತನರು, ಲೈಂಗಿಕ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮುದಾಯದವರು ಪಾಲ್ಗೊಳ್ಳುವಂತೆ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ.

ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ

ಉಡುಪಿಯ ಕಿನ್ನಿಮುಲ್ಕಿಯ ಸ್ವಾಗತ ಗೋಪುರದ ಬಳಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ. ತಾಲೂಕು ಮಟ್ಟದಲ್ಲಿ ಮರವಂತೆ, ಕುಂದಾಪುರ, ಬ್ರಹ್ಮಾವರ ಹಾಗೂ ಉಚ್ಚಿಲದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಮುಕ್ತಾಯದ ನಂತರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ವಿವಿಧ ರೂಪಕ

ಪ್ರಜಾಪ್ರಭುತ್ವದ ವಿವಿಧ ರೂಪಗಳನ್ನು ಸಾರುವ ಗ್ರೀನ್​ ಡೆಮಾಕ್ರಸಿ, ಯನಿಟಿ ಇನ್​ ಡೈವರ್ಸಿಟಿ, ಇಂಡಿಯನ್​ ಕಾನ್​ಸ್ಟಿಟ್ಯೂಷನ್​, ವುಮೆನ್​ ಇನ್​ ಡೆಮಾಕ್ರಸಿ, ಫ್ರೆಟರ್ನಿಟಿ ಎಕ್ರಾಸ್​ ಫೇಥ್ಸ್​, ಯೂಥ್​ ಆ್ಯಸ್​ ಟಾರ್ಚ್​ ಬಿಯರೆರ್ಸ್​ ಆ್ಯಂಡ್​ ಡೆಮಾಕ್ರಸಿ, ಲಿಬರ್ಟಿ ಥ್ರೋ ದಿ ಏಜಸ್​ ಎಂಬಿತ್ಯಾದಿ ಶೀರ್ಷಿಕೆಯ 10*10 ಅಳತೆಯ ಕಟೌಟ್ಸ್​ಗಳನ್ನು ಜಿಲ್ಲಾ ಮತ್ತು ತಾಲೂಕು ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲಾಗುತ್ತಿದೆ.

ಏಕಮುಖ ಸಂಚಾರ

ಬೈಂದೂರಿನಿಂದ ಹೆಜಮಾಡಿಯವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ 8:30ರಿಂದ 10:30ರ ವರೆಗೆ ಎಲ್ಲ ಬಗೆಯ ವಾಹನಗಳ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ರಸ್ತೆಯ ಬಲಭಾಗದಲ್ಲಿ (ಸಮುದ್ರದ ಕಡೆ) ಮಾನವ ಸರಪಳಿ ಇರಲಿದೆ. ಹೆದ್ದಾರಿಯಲ್ಲಿ ಚಲಿಸುವ ವಾಹನಗಳು ಈ ಅವಧಿಯಲ್ಲಿ ನಿಧಾನ ಗತಿಯಲ್ಲಿ ಸಾಗುವಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

ಡ್ರೋನ್​ ಕ್ಯಾಮರಾದಿಂದ ಚಿತ್ರೀಕರಣ

ಬೆಳಗ್ಗೆ 9:30ಕ್ಕೆ ಮಾನವ ಸರಪಳಿಯಲ್ಲಿ ಪಾಲ್ಗೊಳ್ಳುವವರು ಸರತಿ ಸಾಲಿನಲ್ಲಿ ನಿಲ್ಲಲಿದ್ದಾರೆ. ಬಳಿಕ ನಾಡಗೀತೆ ಹೇಳಲಾಗುವುದು. 9:40ರಿಂದ 9:55ರ ವರೆಗೆ ಮುಖ್ಯ ಅತಿಥಿಗಳ ಭಾಷಣ ನಡೆಯಲಿದೆ. ನಂತರ ಸಂವಿಧಾನ ಪ್ರಸ್ತಾವನೆ ಓದುವುದು. 10 ಗಂಟೆಗೆ ಮಾನವ ಸರಪಳಿಯಲ್ಲಿ ಕೈ-ಕೈ ಹಿಡಿದು ನಿಲ್ಲುವುದು. ಮಾನವ ಸರಪಳಿಯಲ್ಲಿಯೇ ಎರಡೂ ಕೈಗಳನ್ನು ಮೇಲೆತ್ತಿ "ಜೈಹಿಂದ್​ ಮತ್ತು ಜೈ ಕರ್ನಾಟಕ' ಎಂದು ಘೋಷಣೆ ಕೂಗಿ ಸರಪಳಿಯನ್ನು ಕಳಚುವುದು. ಈ ಎಲ್ಲ ಮಹತ್ವದ ಕಾರ್ಯಕ್ರಮವನ್ನು ಡ್ರೋನ್​ ಕ್ಯಾಮರಾದಲ್ಲಿ ಚಿತ್ರೀಕರಿಸಲಾಗುತ್ತಿದೆ.

ಮಾನವ ಸರಪಳಿಯಲ್ಲಿ ಭಾಗವಹಿಸುವವರು ಪ್ರಮಾಣಪತ್ರ ಪಡೆಯಬಹುದಾಗಿದ್ದರಿಂದ ಈಗಾಗಲೇ ಸಾವಿರಾರು ಜನರು ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಮಾಡದೇ ಇರುವವರೂ ಸಹ ಮಾನವ ಸರಪಳಿಯಲ್ಲಿ ಪಾಲ್ಗೊಂಡು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಯಶಸ್ವಿಗೊಳಿಸಬೇಕು. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ

ಉಡುಪಿ ಕಿನ್ನಿಮುಲ್ಕಿಯ ಸ್ವಾಗತ ಗೋಪುರದಿಂದ ಹೆದ್ದಾರಿ ಬಳಿಯ ಅಂಬಲಪಾಡಿ ತನಕ ರಾಷ್ಟ್ರಧ್ವಜ ಹಾಗೂ ಕಿನ್ನಿಮುಲ್ಕಿಯ ಸ್ವಾಗತ ಗೋಪುರದಿಂದ ಹೆಜಮಾಡಿ ಮಾರ್ಗದತ್ತ ಕನ್ನಡ ಧ್ವಜ (ತಲಾ 500 ಮೀಟರ್​ ಉದ್ದ)ವನ್ನು ಪ್ರದರ್ಶಿಸಲಾಗುತ್ತಿದೆ. ಇದಕ್ಕೆಂದೇ ಶಾಲಾ&ಕಾಲೇಜ್​ ವಿದ್ಯಾರ್ಥಿಗಳು, ಪೊಲೀಸ್​ ಸಿಬ್ಬಂದಿ, ಕ್ರೀಡಾಪಟುಗಳು ಮತ್ತು ಕರಾಟೆ ಪಟುಗಳು ಸೇರಿ ಸುಮಾರು 2 ಸಾವಿರ ಜನರನ್ನು ನಿಯೋಜಿಸಲಾಗಿದೆ. ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. | ಡಾ. ರೋಶನ್​ ಶೆಟ್ಟಿ. ಸಹಾಯಕ ನಿರ್ದೇಶಕ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net