ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

07 chn
Published on

ಚನ್ನಗಿರಿ: ಬೆಲೆ ಏರಿಕೆ ವಿರೋಧಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನೇತೃತ್ವದಲ್ಲಿ ತಾಲೂಕು ಬಿಜೆಪಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಪ್ರವಾಸಿ ಮಂದಿರದಿಂದ ಪಟ್ಟಣದ ಬಸ್​ನಿಲ್ದಾಣ, ಕಲ್ಲುಸಗರ ರಸ್ತೆ, ಗಣಪತಿವೃತ್ತ, ಜೆಸಿ ರಸ್ತೆ, ನೃಪತುಂಗ ರಸ್ತೆ ಮೂಲಕ ಗಾಂಧಿ ವೃತ್ತದ ಬಳಿ ಬಂದು ಮಾನವ ಸರಪಳಿ ನಿರ್ವಿುಸಿ, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೊಷಣೆ ಕೂಗಿ ತಹಸೀಲ್ದಾರ್ ಎನ್.ಜೆ. ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ದಿನನಿತ್ಯ ಬಳಸುವ ಹಾಲು, ವಿದ್ಯುತ್, ಡೀಸೆಲ್, ನೀರು, ಬಸ್, ಮೆಟ್ರೋ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರದ ಮೇಲೆ ರಾಜ್ಯದ ಜನತೆ ನಂಬಿಕೆ ಇಟ್ಟು ಅಧಿಕಾರವನ್ನು ನೀಡಿದರು. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಗ್ಯಾರಂಟಿ ಅನುಷ್ಠಾನ ಮಾಡುವುದಾಗಿ ಹೇಳಿದ್ದರೂ ಇದುವರೆಗೆ ಗ್ಯಾರಂಟಿಗಳು ಸರಿಯಾಗಿ ಅನುಷ್ಠಾನವಾಗಿಲ್ಲ. ಗ್ಯಾರಂಟಿಗಳನ್ನು ಉಳಿಸಿಕೊಳ್ಳುವ ಸಲುವಾಗಿ ಬೆಲೆ ಏರಿಕೆ ಮಾಡಿದೆ ಎಂದರು.

ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ಅಧಿಕಾರಕ್ಕೆ ಬಂದ ಸರ್ಕಾರ ಜನಪರವಾಗಿ ನಿಲ್ಲುವ ಕಾರ್ಯಗಳನ್ನು ಮಾಡಬೇಕು. ಕೈಗೆ ಅಧಿಕಾರ ಸಿಕ್ಕಿದೆ ಎನ್ನುವ ಕಾರಣಕ್ಕೆ ಮನಬಂದಂತೆ ದಿನನಿತ್ಯ ಬಳಸುವ ವಸ್ತುಗಳ ಬೆಲೆಯನ್ನು ಏರಿಸುವುದು ಸರಿಯಲ್ಲ. ಜನರು ರೊಚ್ಚಿಗೆ ಏಳುವ ಮೊದಲು ಎಚ್ಚರವಾಗಿ ಅನ್ಯಾಯವಾಗದ ರೀತಿ ಆಡಳಿತ ನಡೆಸಿ ಎಂದರು.

ವೃತ್ತದ ಬಳಿ ಮಾನವ ಸರಪಳಿ ನಿರ್ವಿುಸಿದ ಕಾರಣ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಕುಮಾರ್, ಪಿಎಲ್​ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಗದೀಶ್, ತಾಪಂ ಮಾಜಿ ಅಧ್ಯಕ್ಷ ಎ.ಎಸ್. ಬಸವರಾಜ್, ಪಿ. ಲೋಹಿತ್​ಕುಮಾರ್, ಚನ್ನಬಸಪ್ಪ, ಹಿರೇಮಳಲಿ ಲೋಕೇಶ್ವರಪ್ಪ, ರುದ್ರೇಗೌಡ್ರು, ಪುರಸಭೆ ಸದಸ್ಯ ಪಟ್ಲಿ ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net