

ಮಡಿಕೇರಿ: ರಾಷ್ಟ್ರೀಯ ಜನಗಣತಿಯ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್‌ನ್ನು ಸೇರಿಸಬೇಕು. ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಪಾಡಿನಾಡ್‌ನ ಕಕ್ಕಬೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಜನಜಾಗೃತಿ ಮೂಡಿಸಿತು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಕಕ್ಕಬೆ ಜಂಕ್ಷನ್‌ನಲ್ಲಿ ಇತ್ತೀಚೆಗೆ ನಡೆದ ಮಾನವ ಸರಪಳಿ ನಿರ್ಮಿಸಿ ಕೊಡವ ಲ್ಯಾಂಡ್ ಪರ ಘೋಷಣೆಗಳನ್ನು ಕೂಗಿದ ಸದಸ್ಯರು ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆದರು.
ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು, ೨೦೨೫-೨೬ರ ರಾಷ್ಟ್ರೀಯ ಜನಗಣತಿಯಲ್ಲಿ ಆದಿಮಸಂಜಾತ ಕೊಡವರಿಗೆ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಅನ್ನು ಸೇರಿಸಲು ಕೇಂದ್ರ ಗೃಹ ಮಂತ್ರಾಲಯ ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯೋಗವನ್ನು ಒತ್ತಾಯಿಸುವುದಾಗಿ ತಿಳಿಸಿದರು.
೧೮೭೧-೭೨ ರಿಂದ ೧೯೩೧ ರವರೆಗೆ ಜನಗಣತಿಯು ನಿಖರ ಮತ್ತು ವೈಜ್ಞಾನಿಕವಾಗಿತ್ತು. ಕೊಡವರನ್ನು ಕೊಡವಲ್ಯಾಂಡ್‌ನ ಏಕ-ಜನಾಂಗೀಯ, ಆನಿಮಿಸ್ಟಿಕ್, ಆದಿಮಸಂಜಾತ ಯೋಧ ಕುಲವೆಂದು ಗುರುತಿಸಿತು. ಈ ಮನ್ನಣೆ ಕೊಡವ ಸಮುದಾಯದ ಜನಾಂಗೀಯ ವಂಶಾವಳಿಯನ್ನು ದೃಢಪಡಿಸಿತು. ಪ್ರಸ್ತುತ ಜನಗಣತಿ ಸಂದರ್ಭ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಸೇರಿಸಿದರೆ ಕೊಡವ ಸಮುದಾಯದ ನಿಖರವಾದ ಪ್ರಾತಿನಿಧ್ಯವನ್ನು ಖಚಿತಪಡಿಸಬಹುದು. ಸರ್ಕಾರ ಕೊಡವ ಸಮುದಾಯದ ನಿರ್ದಿಷ್ಟ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸೋಶಿಯಲ್ ಇಂಜಿನಿಯರಿಂಗ್ ಮೂಲಕ ಅವರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಉದ್ದೇಶಿತ ನೀತಿಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ. ಕೊಡವ ಸಮುದಾಯದ ವಿಶಿಷ್ಟ ಗುರುತನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಸಿಕ್ಕಿಂನಲ್ಲಿ ಬೌದ್ಧ ಬಿಕ್ಷುಗಳಿಗಾಗಿ ನೀಡಿದ ಸಂಘ ಮತಕ್ಷೇತ್ರದಂತೆ ೨೦೨೬ರ ಕ್ಷೇತ್ರ ಪುನರ್ವಿಂಗಡಣೆಯ ಸಮಯದಲ್ಲಿ ಕೊಡವರಿಗೂ ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ರಚಿಸಬೇಕು. ಇದು ಕಡ್ಡಾಯ ಕುಟುಂಬ ಯೋಜನೆಯ ಪರಿಪಾಲನೆ, ರಾಷ್ಟ್ರದ ಭದ್ರತೆಗಾಗಿ ಸೇನಾಕ್ಷೇತ್ರದ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡವ ಸಮುದಾಯ ನೀಡಿದ ಕೊಡುಗೆಗೆ ನೀಡುವ ಅಮೋಘ ಕೊಡುಗೆಯಾಗುತ್ತದೆ ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟರು.
ಕೊಡವ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಟ್ಯಾಗ್ ನೀಡಬೇಕು. ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಆದಿಮಸಂಜಾತ ಸಮಾವೇಶದ ಅಡಿಯಲ್ಲಿ ಮಾನ್ಯತೆಯನ್ನು ಕಲ್ಪಿಸಬೇಕು. ಹೊರಗಿನ ಆಡಳಿತಗಾರರು ವಶಪಡಿಸಿಕೊಂಡ, ಬಂಡವಾಳಶಾಹಿಗಳಿಗೆ ಅಡಮಾನವಿಟ್ಟ, ಭೋಗ್ಯಕ್ಕೆ ನೀಡಿದ ಮತ್ತು ಮಾರಾಟ ಮಾಡಿದ ಕೊಡವರ ಪೂರ್ವಾರ್ಜಿತ ಅನುವಂಶಿಕ ಭೂ ಹಕ್ಕುಗಳನ್ನು ಮರುಸ್ಥಾಪಿಸಬೇಕು. ಸಾಂಪ್ರದಾಯಿಕ ತಾಯ್ನಾಡಿನಲ್ಲಿ ಕೊಡವರ ಐತಿಹಾಸಿಕ ನಿರಂತರತೆಯ ಶಾಸನಬದ್ಧ ಅನುಮೋದನೆಯನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸವಿತಾ, ಪಟ್ರಪಂಡ ಲೀಲಾ, ಮಚಂಡ ವನಿತಾ, ನಂಬಡಮಂಡ ಶೈಲಾ, ನಾಟೋಳಂಡ ಪುಷ್ಪಾ, ಅಯ್ಯನೆರವಂಡ ಗಂಗೆ, ಬಾಚಮಂಡ ರಾಜ ಪೂವಣ್ಣ, ನಾಪೋಕ್ ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ, ಕಲಿಯಂಡ ಪ್ರಕಾಶ್, ಪಾಂಡಂಡ ನರೇಶ್, ಅಪ್ಪಾರಂಡ ಶ್ರೀನಿವಾಸ್, ಬೊಳಿಯಾಡಿರ ಸಂತು, ಕಲ್ಯಾಟಂಡ ರಘು, ಬಾಚಮಂಡ ಲವ, ಅಪ್ಪಾರಂಡ ವಿಜು, ಅಪ್ಪಾರಂಡ ಪ್ರಕಾಶ್, ಪೊನ್ನೊಳ್ತಂಡ ರಘು, ಅರೆಯಡ ಗಿರೀಶ್, ಅರೆಯಡ ಅಶೋಕ್, ಪುದಿಯೊಕ್ಕಡ ಪೃಥ್ವಿ, ಬಡಕಡ ಸುರೇಶ್ ಇತರರಿದ್ದರು.