ಇಷ್ಟಲಿಂಗ ಪೂಜೆಯಿಂದ ಮಾನವ ಜನ್ಮ ಸಾರ್ಥಕ

ishtalinga
Published on

ಲಕ್ಷ್ಮೇಶ್ವರ: ಲಿಂಗದೀಕ್ಷೆಯು ಭಗವಂತನನ್ನು ಸಾಕ್ಷಾತ್ಕಾರಪಡಿಸಿಕೊಳ್ಳುವ ಚೈತನ್ಯ ಶಕ್ತಿಸಾಧನವಾಗಿದೆ. ಶ್ರೀಗುರುವಿನಿಂದ ಶಿವದೀಕ್ಷಾ ಸಂಪನ್ನರಾಗಿ ಇಷ್ಟಲಿಂಗ ಪಡೆದು ಪೂಜಿಸಿದರೆ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಗುಬ್ಬಿ ನಂಜುಡೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಬಾಲೇಹೊಸುರು ಗ್ರಾಮದ ಶ್ರೀ ದಿಂಗಾಲೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಜಂಗಮ ವಟುಗಳಿಗೆ ಅಯ್ಯಚಾರ-ಲಿಂಗದೀಕ್ಷೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ವೀರಶೈವ ಧರ್ಮದಲ್ಲಿ ಗುರು-ಲಿಂಗ-ಜಂಗಮಕ್ಕೆ ವಿಶಿಷ್ಟ ಸ್ಥಾನವಿದೆ. ಲಿಂಗಧಾರಣೆ, ಶಿವಪೂಜೆಯಿಂದ ಆತ್ಮಬಲ ಹೆಚ್ಚುತ್ತದೆ. ಸಮಾಜದಲ್ಲಿನ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಪ್ರಾಪ್ತವಾಗುತ್ತದೆ. ವಿಭೂತಿ, ಲಿಂಗ, ಜೋಳಿಗೆ, ದಂಢ ಇವು ಸಂಸ್ಕಾರದ ಸಂಕೇತಗಳಾಗಿವೆ. ವೀರಶೈವ ಲಿಂಗಾಯತ ಸಮಾಜದವರೆಲ್ಲರೂ ನಿತ್ಯ ಓಂ ನಮಃ ಶಿವಾಯ ಶ್ರೇಷ್ಠ ಮಂತ್ರ ಪಠಣ ಮಾಡಬೇಕು. ಲಿಂಗದೀಕ್ಷೆ ಪಡೆದವರು ಸಮಾಜದಲ್ಲಿ ನಿತ್ಯ ಶಿವಪೂಜೆ ಮಾಡಿ ಧಾರ್ಮಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಧರ್ಮ ಸಂರಕ್ಷಣೆಗೆ ಮುಂದಾಗಬೇಕು. ದುಶ್ಚಟಗಳನ್ನು ಬಿಟ್ಟು ಒಳ್ಳೆಯ ವಿದ್ಯಾಭ್ಯಾಸ ಪಡೆದು ನಾಡಿಗೆ ಒಳ್ಳೆಯ ನಾಗರಿಕರಾಗಲು ಈ ಲಿಂಗದೀಕ್ಷೆ ಅಯ್ಯಚಾರ ಸೂಕ್ತ ಮಾರ್ಗದರ್ಶನ ಮಾಡುತ್ತದೆ ಎಂದರು.

ದಿಂಗಾಲೇಶ್ವರಮಠದ ಪಟ್ಟಾಧ್ಯಕ್ಷ ಜ.ಫಕೀರ ದಿಂಗಾಲೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಬೆಳಗ್ಗೆ ಷಟ್‌ಸ್ಥಲ ದ್ವಜಾರೋಹಣ ನೆರವೇರಿಸಿ ಜಾತ್ರಾಮಹೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. 50ಕ್ಕೂ ಹೆಚ್ಚು ಜಂಗಮ ವಟುಗಳಿಗೆ ಲಿಂಗದೀಕ್ಷೆ ನೀಡಲಾಯಿತು. ಶಿವಲಿಂಗ ಪೂಜೆ, ಪ್ರಸಾದ ಸೇವೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net