ಮಾನವೀಯ ನೆಲೆಯಲ್ಲಿ ಬಡವರಿಗೆ ಸಹಾಯ ಅಗತ್ಯ ಎಂದ ಮಾಜಿ ಸಚಿವ ಬಸವರಾಜ ರಾಯರಡ್ಡಿ

110520 Yalaburga Basavaraj Rayareddy Food kit Distribute
Published on

ಯಲಬುರ್ಗಾ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕ್ಷೇತ್ರದ ಬಡ ಮತ್ತು ನಿರ್ಗತಿಕ ಆರು ಸಾವಿರ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಸ್ಥಳೀಯ ಶ್ರೀ ಮೊಗ್ಗಿಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ಬಡ ಮತ್ತು ಮಧ್ಯಮ ವರ್ಗದವರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕರೊನಾ ವೈರಸ್ ಪರಿಣಾಮದಿಂದ ಬಡವರು ತೊಂದರೆಗೊಳಗಾಗಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ 144 ಹಳ್ಳಿಗಳ ಬಡವರಿಗೆ 6 ಸಾವಿರ ಕಿಟ್‌ಗಳನ್ನು ತಲುಪಿಸಲು ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರಿಗೆ ಸೂಚಿಸಲಾಗಿದೆ. ರಾಜಕೀಯ ಮತ್ತು ಸ್ವಾರ್ಥಕ್ಕಾಗಿ ಆಹಾರ ಧಾನ್ಯ ಕಿಟ್ ವಿತರಣೆ ಮಾಡುತ್ತಿಲ್ಲ. ಕಷ್ಟದಲ್ಲಿ ಇರುವ ಕುಟುಂಬಗಳಿಗೆ ಮಾನವೀಯ ದೃಷ್ಟಿಯಿಂದ ಸಹಾಯ ಮಾಡಲಾಗುತ್ತಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿದರು. ಸಂಸ್ಥಾನ ಹಿರೇಮಠದ ಶ್ರೀಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆಹಾರ ಧಾನ್ಯ ಕಿಟ್ ವಿತರಣಾ ವಾಹನಗಳಿಗೆ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹಾಗೂ ಮಾಜಿ ಸಚಿವ ಬಸವರಾಜ ರಾಯರಡ್ಡಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಜಿಪಂ ಸದಸ್ಯರಾದ ಹನುಮಂತಗೌಡ ಚಂಡೂರು, ಹೊಳಿಯಮ್ಮ ಶರಣೇಗೌಡ ಪಾಟೀಲ್, ಗಿರಿಜಾ ರೇವಣಪ್ಪ ಸಂಗಟಿ, ತಾಪಂ ಸದಸ್ಯೆ ಸಾವಿತ್ರಿ ಗೊಲ್ಲರ್, ಪ್ರಮುಖರಾದ ಯಂಕಣ್ಣ ಯರಾಶಿ, ರಾಘವೇಂದ್ರಾಚಾರ್ ಜೋಶಿ, ಸಂಗಣ್ಣ ಟೆಂಗಿನಕಾಯಿ, ಕಳಕಪ್ಪ ಕಂಬಳಿ, ಡಾ.ಮಲ್ಲಿಕಾರ್ಜುನ ಬಿನ್ನಾಳ, ಆರ್.ಜಿ.ನಿಂಗೋಜಿ, ಶರಣಪ್ಪ ಗಾಂಜಿ, ಡಾ.ಶಿವನಗೌಡ ದಾನರಡ್ಡಿ, ಬಿ.ಎಂ.ಶಿರೂರ, ರಾಮಣ್ಣ ಸಾಲಭಾವಿ, ಬಸವರಾಜ ಪೂಜಾರ್, ಮಲ್ಲೇಶಗೌಡ ಮಾಲಿಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net