

ದೊಡ್ಡಬಳ್ಳಾಪುರ: ರಥಸಪ್ತಮಿ ಅಂಗವಾಗಿ ತಾಲೂಕಿನ ಹುಲುಕುಡಿ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮನವರ 44ನೇ ವರ್ಷದ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.
ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥಕ್ಕೆ ಬಾಳೆ ಹಣ್ಣು, ದವನ ಅರ್ಪಿಸಿದರು.
ವೀರಗಾಸೆ ಕುಣಿತ, ಕಂಸಾಳೆ ಹಾಗೂ ಡೊಳ್ಳು ಕುಣಿತ ಜಾತ್ರೆಗೆ ಮೆರುಗು ನೀಡಿದವು.
ಹುಲುಕುಡಿ ಬೆಟ್ಟದ ಮೇಲಿನ ವೀರಭದ್ರಸ್ವಾಮಿ ದೇಗುಲಕ್ಕೆ ಸಾವಿರಾರು ಜನರು ಭೇಟಿ ನೀಡಿ ದರ್ಶನ ಪಡೆದರು. ದೇವಾಲಯದಲ್ಲಿ ಹೋಮ ಹಾಗೂ ವಿಶೇಷ ಪೂಜೆ, ಮಂಗಳವಾರ ಸಂಜೆ ಉಯ್ಯಲೋತ್ಸವ, ವೀರಗಾಸೆ ಕುಣಿತ, ಅಗ್ನಿಕೊಂಡ, ಅಕ್ಕಿ ಪೂಜೆ ಹಾಗೂ ದೀಪಾರಾಧನೆ ಕಾರ್ಯಕ್ರಮಗಳು ನಡೆದವು.
ತುಮಕೂರು ರಂಭಾಪುರಿ ಶಾಖಾಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸೇವಾ ಕಾರ್ಯ ಮಾಡುವುದು ಸಹ ಭಗವಂತನನ್ನು ಸಾಕ್ಷಾತ್ಕಾರ ಮಾಡಿ ಕೊಳ್ಳುವ ಹಾದಿಯಾಗಿದೆ. ಧಾರ್ಮಿಕ ನೆಲೆಗಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಬೇಕಿದೆ.
ಮನುಷ್ಯ ಜನ್ಮವನ್ನ ಸಾರ್ಥಕ ಮಾಡಿಕೊಳ್ಳಬೇಕು. ಸಂಪತ್ತು ಕೂಡಿಟ್ಟು ಕೊಳ್ಳುವುದು ಬೇಡ. ದಾನ, ಪರೋಪಕಾರ ಮಾಡಬೇಕು. ದಾನ ಮಾಡಿದರೆ ಮನುಷ್ಯರಿಗೆ ಪುಣ್ಯ ದೊರಕುತ್ತದೆ. ಇಂದಿನ ದಿನಗಳಲ್ಲಿ ಧಾರ್ಮಿಕ ಭಾವನೆಗಳು ಕಡಿಮೆಯಾಗುತ್ತಿವೆ. ದೇವರು, ಧರ್ಮದ ಬಗ್ಗೆ ಇಂದಿನ ಯುವಪೀಳಿಗೆ ಶ್ರದ್ಧೆ ಬೆಳೆಸಿಕೊಳ್ಳಬೇಕು. ಜಾತ್ರೆ, ಉತ್ಸವಗಳು ಎಲ್ಲಾ ಜಾತಿ, ವರ್ಗದ ಜನರು ಒಂದೆಡೆ ಸೇರಲು ಉತ್ತಮ ಅವಕಾಶ ಕಲ್ಪಿಸುತ್ತವೆ. ಕ್ಷೇತ್ರದಲ್ಲಿನ ಅನ್ನದಾಸೋಹ ಕಾರ್ಯ ಶ್ಲಾಘನೀಯವಾದುದು ಎಂದರು.
ಹುಲುಕುಡಿ ಕ್ಷೇತ್ರ ತನ್ನದೇ ಆದ ಇತಿಹಾಸ ಹೊಂದಿದ್ದು, ವಿಶಿಷ್ಟವಾಗಿದೆ. ಭಕ್ತರು ಕ್ಷೇತ್ರದಲ್ಲಿ ನಡೆಯಬೇಕಾಗಿರುವ ಅಭಿವೃದ್ಧಿ ಕೆಲಸಗಳಲ್ಲಿ ಕೈಜೋಡಿಸುವ ಮೂಲಕ ಕ್ಷೇತ್ರದ ಪ್ರಗತಿಗೆ ಎಲ್ಲರೂ ಸಹಕರಿಸಬೇಕು. -ಟಿ. ವೆಂಕಟರಮಣಯ್ಯ, ಮಾಜಿ ಶಾಸಕ