

ಹುಲ್ಲಹಳ್ಳಿ: ಅಕ್ರಮ ಹಾಲು ಶೇಖರಣೆ ಹಾಗೂ ವಂಚನೆ ಆರೋಪದ ಹಿನ್ನೆಲೆಯಲ್ಲಿ ಹುಲ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಪ್ರಕಾಶ್‌ರನ್ನು ಅಮಾನತುಗೊಳಿಸಲಾಗಿದೆ.
ಡೇರಿಯಲ್ಲಿ ಹೆಚ್ಚುವರಿಯಾಗಿ ಹಾಲು ಶೇಖರಣೆ ಮಾಡಿಕೊಂಡು ಖಾಸಗಿ ವ್ಯಕ್ತಿಯ ಹೆಸರಿಗೆ ಹಣ ಜಮಾ ಮಾಡುವ ಮೂಲಕ ಸಂಘದ ಷೇರುದಾರ ರೈತರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಮೈಮುಲ್ ಅಧಿಕಾರಿಗಳ ತಂಡ ಸೋಮವಾರ ಪರಿಶೀಲನೆ ನಡೆಸಿತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಕಾಶ್‌ರನ್ನು ಕಾರ್ಯದರ್ಶಿ ಹುದ್ದೆಯಿಂದ ಅಮಾನತು ಮಾಡಲಾಗಿದೆ.
ಡೇರಿಗೆ ಪೂರೈಸುವ ಹಾಲನ್ನು ಅಳತೆ ಮಾಪನಕ್ಕೆ ಹಾಕುತ್ತಿದ್ದ ವೇಳೆ ಪರಿಶೀಲಿಸಿದಾಗ ದಿನಕ್ಕೆ 50ರಿಂದ 60 ಲೀ. ಹಾಲು ವ್ಯತ್ಯಾಸ ಆಗುತ್ತಿತ್ತು. ಇನ್ನು ಅಕ್ರಮವಾಗಿ ಶೇಖರಣೆಯಾಗುತ್ತಿದ್ದ ಹಾಲನ್ನು ಖಾಸಗಿ ವ್ಯಕ್ತಿಯ ಖಾತೆಯಲ್ಲಿ ಜಮಾ ಮಾಡಿ ಹಣವನ್ನು ಸಂದಾಯ ಮಾಡಲಾಗುತ್ತಿತ್ತು. ಅದನ್ನು ಗಮನಿಸಿದ ಕೆಲ ಷೇರುದಾರರು ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರಿಗೆ ದೂರಿದ್ದರು. ಅಲ್ಲದೆ ಸೋಮವಾರ ಸಂಘದ ಕಚೇರಿಯಲ್ಲಿ ಕಾರ್ಯದರ್ಶಿ ಪ್ರಕಾಶ್‌ರನ್ನು ತರಾಟೆಗೆ ತೆಗೆದುಕೊಂಡು ನ್ಯಾಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೈಮುಲ್ ಸಹಾಯಕ ವ್ಯವಸ್ಥಾಪಕ ಡಾ.ಅಕ್ಷಯ್, ಅವರ ಸಹಾಯ ಕಾರ್ಯದರ್ಶಿ ನಂಜುಂಡಸ್ವಾಮಿ ಹಾಗೂ ಅಧಿಕಾರಿಗಳ ತಂಡ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಪರಿಶೀಲನೆ ನಡೆಸಿದಾಗ ಅಕ್ರಮ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಿ, ಅ. 6 ರಂದು ಸಂಘದ ಆವರಣದಲ್ಲಿ ಅಧ್ಯಕ್ಷ ಮಂಜುನಾಥ್ ಅವರಿಗೆ ಸಭೆ ಕರೆಯಬೇಕೆಂದು ತಿಳಿಸಿ ಅಲ್ಲಿಯವರೆಗೆ ಕಾರ್ಯದರ್ಶಿ ಪ್ರಕಾಶ್ ರನ್ನು ಅಮಾನತಿನಲ್ಲಿಡಲು ಸೂಚಿಸಿದರು.
ನಿರ್ದೇಶಕರಾದ ಅಶೋಕ್, ಬಸವರಾಜು, ಎಸ್.ಎನ್.ರೇವಣ್ಣ, ರಾಜಮ್ಮ, ಕುಮಾರ್, ನಾಗೇಂದ್ರ, ಗಿರಿ ಷೇರುದಾರರಾದ ನವೀನ ಮಾದೇವ ನಾಯಕ, ನಾಗೇಂದ್ರ, ಗಿರೀಶ್, ರೇಣುಕಾ, ಪಾಪಣ್ಣ, ಅಭಿಷೇಕ್, ಕಿಶೋರ್ ದಿಲೀಪ್, ಕಿರಣ್, ಮಹೇಶ್ ನಾಯ್ಕ, ದೇವರ ನಾಯ್ಕ ಇತರರಿದ್ದರು.