ಹುಳಿಯಾರಿನ ಪೇಟೆ ಬೀದಿ ರಸ್ತೆ ಅಭಿವೃದ್ಧಿಗೆ ಗಡುವು ; ಮುಖ್ಯಾಧಿಕಾರಿಗೆ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ತರಾಟೆ

26HULIYAR1
Published on

ಹುಳಿಯಾರು: ಹುಳಿಯಾರಿನ ಪೇಟೆ ಬೀದಿ ರಸ್ತೆ ಕಾಮಗಾರಿ ಆರಂಭ ಸೇರಿ ವಿವಿಧ ಬೇಡಿಕೆಗಳನ್ನು ಆ.30ರ ಒಳಗೆ ಈಡೇರಿಸದಿದ್ದರೆ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ಪಪಂ ಮುಖ್ಯಾಧಿಕಾರಿಗೆ ಗಡುವು ನೀಡಿ ಎಚ್ಚರಿಕೆ ನೀಡಿದರು.

ಪೇಟೆ ಬೀದಿಯ ನಿವಾಸಿಗಳೊಂದಿಗೆ ಪಟ್ಟಣ ಪಂಚಾಯಿತಿಗೆ ಗುರುವಾರ ಆಗಮಿಸಿದ ಅವರು, ಪೇಟೆ ಬೀದಿಯ ರಸ್ತೆ ಕಾಮಗಾರಿಗೆ ಮಾರ್ಚ್‌ನಲ್ಲಿ ಟೆಂಡರ್ ಕರೆದಿದ್ದು ಏಪ್ರಿಲ್‌ನಲ್ಲಿ ಟೆಂಡರ್ ಪ್ರೋಸಸ್ ಮುಗಿದಿದ್ದರೂ ಇಲ್ಲಿಯವರೆವಿಗೆ ಅಂದರೆ 4 ತಿಂಗಳಾದರೂ ಏಕೆ ಕಾಮಗಾರಿ ಆರಂಭಿಸಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೆ ಟೆಂಡರ್ ಆಗುವ ಮುಂಚೆಯೇ ಗುದ್ದಲಿ ಪೂಜೆ ಏಕೆ ಮಾಡಿದ್ರಿ ಎಂದು ಖಾರವಾಗಿ ಪ್ರಶ್ನಿಸಿದರು.

2019ರಲ್ಲಿ 1.03ಕೋಟಿ ರೂಪಾಯಿ ಅನುದಾನ ಬಂದಿದೆ. ಆ ನಂತರ 3 ಕೋಟಿ ರೂ. ವಿಶೇಷ ಅನುದಾನ ಬಂದಿದೆ. ಇಷ್ಟು ಅನುದಾನವನ್ನು ಒಂದೂವರೆ ವರ್ಷವಾದರೂ ಖರ್ಚು ಮಾಡದೆ ಜನಪ್ರತಿನಿಧಿಯೊಬ್ಬರ ಪ್ರಚಾರಕ್ಕಾಗಿ ಎನ್ನುವಂತೆ ಆರು ತಿಂಗಳಿಗೊಂದು ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದೀರಿ, ಪೇಟೆ ಬೀದಿಯನ್ನು ಉದ್ದೇಶ ಪೂರ್ವಕವಾಗಿಯೇ ನಿರ್ಲಕ್ಷ್ಯಿಸಿದ್ದೀರಿ ಎಂದು ಆಪಾದಿಸಿದರು.

ಪಟ್ಟಣದ ರಾಜ್‌ಕುಮಾರ್ ರಸ್ತೆ ಸೇರಿ ಊರಿನ ಪ್ರಮುಖ ಬೀದಿಯಲ್ಲಿ ರಸ್ತೆ ಮತ್ತು ಚರಂಡಿ ಒತ್ತುವರಿ ಮಾಡಿದ್ದರೂ ತೆರವಿಗೆ ಮುಂದಾಗಿಲ್ಲ. ಅಂಗಡಿ ಮುಂಭಾಗ ರಸ್ತೆಗೆ ಶೀಟ್ ಹಾಕಿ ಅಂಗಡಿ ಸಾಮಗ್ರಿಗಳನ್ನು ರಸ್ತೆಗೆ ಜೋಡಿಸಿಕೊಳ್ಳುತ್ತಿದ್ದಾರೆ. ಅಂಗಡಿ ಮಾಲೀಕರು ಕಾರುಗಳನ್ನು ರಸ್ತೆಗೆ ನಿಲ್ಲಿಸುತ್ತಿದ್ದರೂ ತೆರವಿಗೆ ಮುಂದಾಗಿಲ್ಲ. ಫುಟ್‌ಪಾತ್ ವ್ಯಾಪಾರಿಗಳು ರಸ್ತೆಯ ದಡದಲ್ಲಿದ್ದರೂ ದೌರ್ಜನ್ಯದಿಂದ ಎತ್ತಂಗಡಿ ಮಾಡಿಸುವ ನಿಮ್ಮ ಪಕ್ಷಪಾತ ಧೋರಣೆ ಖಂಡನೀಯ ಎಂದರು.

ಪಪಂ ಸದಸ್ಯರಾದ ಜಹೀರ್‌ಸಾಬ್, ಎಸ್‌ಆರ್‌ಎಸ್ ದಯಾನಂದ್, ಮಾಜಿ ಸದಸ್ಯ ಎಲ್.ಆರ್.ಚಂದ್ರಶೇಖರ್, ಎಚ್.ಎನ್.ರಾಘವೇಂದ್ರ, ಗುತ್ತಿಗೆದಾರ ಗಂಗಣ್ಣ, ಕಾಮನಬಿಲ್ಲು ಪೌಂಡೇಷನ್‌ನ ಚನ್ನಕೇಶವ, ಕೆಂಕೆರೆ ದೇವರಾಜು, ವಿವೇಕಾನಂದ, ನವೀನ್ ಇದ್ದರು.

ದ್ವೇಷದ ರಾಜಕೀಯ ಒಳ್ಳೆಯದಲ್ಲ: ಪೇಟೆಬೀದಿಯಲ್ಲಿ ನನ್ನ ಮನೆಯಿದೆ ಎನ್ನುವ ಒಂದೇ ಉದ್ದೇಶದಿಂದ ನಾಲ್ಕೈದು ತಿಂಗಳಾದರೂ ರಸ್ತೆ ಕಾಮಗಾರಿ ಆರಂಭಿಸಿಲ್ಲ ಎಂಬುದು ತಿಳಿದಿದೆ. ಇದು ದ್ವೇಷದ ರಾಜಕಾರಣ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಲ್ಲದೆ ಮತ್ತೊಬ್ಬರನ್ನು ಕೆಣಕುವುದು ಸರಿಯಲ್ಲ ಎಂಬುದನ್ನು ಪೇಟೆ ಬೀದಿ ಕೆಲಸಕ್ಕೆ ತಡೆಯೊಡ್ಡಿರುವ ಜನಪ್ರತಿನಿಧಿಗೆ ಹೇಳಿ ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ್‌ಗೆ ಕೆ.ಎಸ್.ಕಿರಣ್ ಕುಮಾರ್ ತಿಳಿಸಿದರು.

ಅಧಿಕಾರಿಗಳಿಂದ ನಿಮಗೆ ಕೆಟ್ಟ ಹೆಸರು: ಪಟ್ಟಣ ಪಂಚಾಯಿತಿ ಇಂಜಿನಿಯರ್ ಮತ್ತು ಪರಿಸರ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಕಚೇರಿಗೆ ಯಾವಾಗ ಬಂದರೂ ಮೀಟಿಂಗ್ ಹೋಗಿದ್ದಾರೆ ಎನ್ನುವ ಸಿದ್ಧ ಉತ್ತರ ಇರುತ್ತದೆ. ಇವರಿಬ್ಬರೂ ಪಟ್ಟಣದಲ್ಲಿ ಓಡಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಮುಂದಾಗಬೇಕು. ಆದರೆ ಕಚೇರಿಗೆ ಬರುವುದೇ ಅಪರೂಪ, ಬಂದರೂ ಕಚೇರಿ ಬಿಟ್ಟು ಪಟ್ಟಣದಲ್ಲಿ ಓಡಾಡುವುದಿಲ್ಲ. ಹಾಗಾಗಿಯೇ ನಿಮಗೆ ಕೆಟ್ಟ ಹೆಸರು ಬರುತ್ತಿದೆ. ಇನ್ನಾದರೂ ಇವರಿಬ್ಬರಿಂದ ಕೆಲಸ ಮಾಡಿಸಲು ನಿಮ್ಮ ಅಧಿಕಾರ ಬಳಸಿ, ಸಾರ್ವಜನಿಕರ ಮೇಲೆ ಕೂಗಾಡಲು ಬಳಸಬೇಡಿ ಎಂದು ಮಂಜುನಾಥ್‌ಗೆ ಕೆ.ಎಸ್.ಕಿರಣ್‌ಕುಮಾರ್ ಸಲಹೆ ನೀಡಿದರು.

ಗಡುವು ಮೀರದೆ ಕಾಮಗಾರಿ ಆರಂಭ: ಪೇಟೆ ಬೀದಿಯ ರಸ್ತೆ ಕಾಮಗಾರಿ ಆರಂಭಕ್ಕೆ ಸೋಮವಾರದವರೆವಿಗೂ ಕಾಲವಕಾಶ ಬೇಡ. ಇನ್ನೆರಡು ದಿನಗಳಲ್ಲಿ ಕಾಮಗಾರಿ ಆರಂಭಿಸುತ್ತೇವೆ. ಇನ್ನು ರಸ್ತೆ ಒತ್ತುವರಿ ವಿಷಯವಾಗಿ ತೆರವುಗೊಳಿಸಲು ಅಂಗಡಿಯವರಿಗೆ ಸೂಚನೆ ನೀಡಿದ್ದೇನೆ. ಈಗ ಮತ್ತೆ ಖುದ್ದು ಹೋಗಿ ತೆರವು ಮಾಡಿಸುತ್ತೇನೆ ಎಂದು ಮುಖ್ಯಾಧಿಕಾರಿ ಮಂಜುನಾಥ್ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net