ನಿವೇಶನ ಹಂಚಿಕೆ ಗೊಂದಲ: ಹುಲಿವಾನ ಗ್ರಾಮಸಭೆ ಮುಂದೂಡಿಕೆ

Hulivana Gram Sabha postponed
Published on

ಮಂಡ್ಯ: ತಾಲೂಕಿನ ಹುಲಿವಾನ ಗ್ರಾಮ ಪಂಚಾಯಿತಿಯಲ್ಲಿ ನಿವೇಶನ ಹಂಚಿಕೆಯಲ್ಲಿ ಗೊಂದಲವಿದ್ದ ಹಿನ್ನೆಲೆಯಲ್ಲಿ ಹಾಗೂ ಅಧ್ಯಕ್ಷರು ಗೈರಾಗಿರುವುದಕ್ಕೆ ಗ್ರಾಮಸಭೆಯನ್ನು ಮುಂದೂಡಲಾಗಿದೆ.

2024-25ನೇ ಸಾಲಿನ ವಾರ್ಡ್ ಮತ್ತು ಗ್ರಾಮ ಸಭೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಅದರಂತೆ ವಿವಿಧ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಾಗೂ ಸ್ಥಳದಲ್ಲಿಯೇ ನಿವೇಶನ ಹಂಚಿಕೆದಾರರಿಗೆ ನಿವೇಶನ ನೀಡುವುದು ಸೇರಿದಂತೆ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳ ಸಮಸ್ಯೆಗಳನ್ನು ಚರ್ಚಿಸಲು ಸಿದ್ಧತೆ ನಡೆಸಲಾಗಿತ್ತು. ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ್ ನೇತೃತ್ವದಲ್ಲಿ ಸಭೆ ನಡೆಸಲು ಆರಂಭಿಸಿದಾಗ ಅಲ್ಲಿದ್ದ ನಿವೇಶನ ಫಲಾನುಭವಿಗಳು ಮೊದಲು ನಿವೇಶನ ಹಂಚಿಕೆ ಕುರಿತು ಮಾತನಾಡಿ ಎಂದು ಪಟ್ಟು ಹಿಡಿದರು. ಆಗ ಮಾತಿನ ಚಕಮಕಿ ನಡೆಯಿತು.

ದಲಿತ ಹಕ್ಕುಗಳ ಸಮಿತಿ ಕಾರ್ಯದರ್ಶಿ ಅಂಬೂಜಿ ಮಾತನಾಡಿ, ನಿವೇಶನ ಹಂಚಿಕೆಗೆಂದು ಸುಮಾರು ಎಂಟು ವರ್ಷದ ಹಿಂದೆಯೇ ಭೂಮಿ ಮಂಜೂರಾಗಿರುತ್ತದೆ. ಆದರೆ ಇಲ್ಲಿತನಕ ನಿವೇಶನ ಹಂಚಿಕೆಗೆ ಮಾಡಿಲ್ಲ, ಇದನ್ನು ಖಂಡಿಸಿ ಹಲವು ಪ್ರತಿಭಟನೆ ನಡೆಸಿ ಒತ್ತಾಯಿಸಲಾಗಿತ್ತು. ಸಭೆಯಲ್ಲಿ ನಿವೇಶನ ಹಂಚುವಂತೆ ಸಭೆ ಕರೆದಿದ್ದೇವೆ ಎಂದು ಹೇಳಿ, ಮಾತು ತಪ್ಪಿರುವುದರಿಂದ ನಿವೇಶನ ಹಂಚಿಕೆಯನ್ನು ಮೊದಲು ಮಾಡಬೇಕೆಂದು ಪಟ್ಟು ಹಿಡಿದು ಗ್ರಾಮ ಸಭೆ ನಡೆಯದಂತೆ ಅಡ್ಡಿ ಪಡಿಸಿದ್ದೇವೆ, ಜತೆಗೆ ಅಧ್ಯಕ್ಷರು ಸಭೆಯಲ್ಲಿ ಕಡ್ಡಾಯವಾಗಿ ಹಾಜರಾಗಿ ನಮಗೆ ನಿವೇಶನ ಕೊಡಿಸಬೇಕು ಎಂದು ಒತ್ತಾಯಿಸಿದರು. ಕೊನೆಗೆ ಸಭೆಯನ್ನು ಮುಂದೂಡಲಾಯಿತು.

ಪಿಡಿಒ ಬಿ.ಆರ್.ಚಂದ್ರು, ಯೋಗೇಶ್, ಶಿವಮಾದು, ಸಿದ್ದರಾಜು, ವಿನೋದ್, ಸಂಪತ್, ರಾಜಣ್ಣ, ಸುರೇಶ್, ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net