ಹುಳಿಮಾವು ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ; ಮುತ್ತಿನಪಲ್ಲಕ್ಕಿ, ಕರಗ ಮಹೋತ್ಸವ

hulimav
Published on

ಬೆಂಗಳೂರು: ನಗರದ ಹೊರವಲಯದ ಹುಳಿಮಾವಿನಲ್ಲಿ ಪುರಾಣ ಪ್ರಸಿದ್ದ ಶ್ರೀಕೋದಂಡರಾಮಸ್ವಾಮಿ ದೇವರ ಬ್ರಹ್ಮರಥೋತ್ಸವ ಮತ್ತು 50 ದೇವರುಗಳ ಮುತ್ತಿನ ಪಲ್ಲಕ್ಕಿ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ರಥೋತ್ಸವಕ್ಕೆ ಹಣ್ಣು ದವನ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ದೇವಸ್ಥಾನದ ಧರ್ಮದರ್ಶಿ ಸಮಿತಿಯ ಸಿ.ಲಕ್ಷ್ಮೀನಾರಾಯಣ್ ಅವರು ಪುಷ್ಪಕ ವಿಮಾನದಿಂದ ಹೂಮಳೆ ಸುರಿಸುತ್ತಿದ್ದಂತೆ ಭಕ್ತರು ಗೋವಿಂದಾ, ಗೋವಿಂದಾ, ಕೋದಂಡರಾಮ ಎನ್ನುತ್ತಾ ರಥವನ್ನು ಎಳೆದರು. ಡೊಳ್ಳು ಕುಣಿತ, ತಮಟೆ,ನಗಾರಿ ಸೇರಿದಂತೆ ವಿವಿಧ ವಾದ್ಯಮೇಳದೊಂದಿಗೆ ದೇವಸ್ಥಾನದ ಸುತ್ತಲು ರಥೋತ್ಸವ ಸಾಗಿತು.

ರಥೋತ್ಸವಕ್ಕೂ ಮುನ್ನ ದೇವಾಲಯದ ಆಡಳಿತ ಮಂಡಲಿಯ ಧರ್ಮದರ್ಶಿಗಳಾದ ಆರ್.ಶರಶ್ಚಂದ್ರ, ಟಿ.ಶ್ರೀನಿವಾಸರೆಡ್ಡಿ, ಹೆಚ್.ಕೆ.ಮುತ್ತಪ್ಪ, ಸಿ.ಲಕ್ಷ್ಮೀನಾರಾಯಣ್, ಶಾಸಕ ಬಿ.ಶಿವಣ್ಣ, ಸಿ.ರವಿಕುಮಾರ್ ವಿಶೇಷ ಪೂಜೆ ಸಲ್ಲಿಸಿದರು.

ಗ್ರಾಮಸ್ಥರು ಭಕ್ತರಿಗೆ ಅನ್ನದಾನ, ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು. ಇಡೀರಾತ್ರಿ ಕೋದಂಡಸ್ವಾಮಿಯೊಂದಿಗೆ ವೆಂಕಟರಮಣಸ್ವಾಮಿ, ಶಂಭಲಿಂಗೇಶ್ವರಸ್ವಾಮಿ, ಆಂಜನೇಯ, ಮುತ್ತುರಾಯಸ್ವಾಮಿ, ಕಬ್ಬಾಳಮ್ಮ,ದೊಡ್ಡಮ್ಮದೇವಿ ಸೇರಿ ಸುಮಾರು 50 ದೇವರುಗಳ ಮುತ್ತಿನ ಪಲ್ಲಕ್ಕಿ ಉತ್ಸವ ಮತ್ತು ರೇಣುಕಾ ಯಲ್ಲಮ್ಮ ದೇವಿಯ ಹೂವಿನ ಕರಗ ಮಹೋತ್ಸವ ಅದ್ದೂರಿಯಾಗಿ ನಡೆಯಿತು.

ಬೆಂಗಳೂರು ನಗರ, ಅನೇಕಲ್, ರಾಮನಗರ, ಕೋಲಾರ, ಆಂಧ್ರ, ತಮಿಳುನಾಡಿನಿಂದ ಸಾವಿರಾರು ಭಕ್ತರು ಆಗಮಿಸಿ ಕರಗ ಉತ್ಸವ ಕಣ್ತುಂಬಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net