

ಅಳ್ನಾವರ: ತಾಲೂಕಿನಾದ್ಯಂತ ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳೆಗಳು ಹಾನಿಗೀಡಾಗುತ್ತಿದ್ದು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.
ತಾಲೂಕಿನ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 800 ಎಕರೆ ಪ್ರದೇಶದ ಹುಲಿಕೇರಿ ಕೆರೆ ಕೋಡಿಬಿದ್ದಿದ್ದು ಕೆರೆ ಕಟ್ಟೆಯ ಮೇಲೇ ಬಾರಿ ಪ್ರಮಾಣದ ನೀರು ಹರಿಯುತ್ತಿದೆ. ಜಲಪಾತದಂತೆ ಕಂಡು ಬರುತ್ತಿರುವ ದೃಶ್ಯವನ್ನು ನೋಡಲು ಸಾರ್ವಜನಿಕರು ತಂಡೋಪ ತಂಡವಾಗಿ ಧಾವಿಸುತ್ತಿದ್ದಾರೆ. ಈ ಕೆರೆಯಿಂದಾಗಿ ಒಂದು ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸಬಹುದು. ಆದರೆ, ಕಾಲುವೆ ನಿರ್ಮಾಣ ಕಾಮಗಾರಿ ವಿಳಂಬದಿಂದಾಗಿ ಸುತ್ತಲಿನ ರೈತರು ನೀರಾವರಿಯಿಂದ ವಂಚಿತರಾಗಿದ್ದಾರೆ.
ವರ್ಷಧಾರೆಯ ಅಬ್ಬರದಿಂದಾಗಿ ಹಳಿಯಾಳ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ದೊಡ್ಡ ಗಾತ್ರದ ತಗ್ಗು ಗುಂಡಿಗಳು ಬಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ.
ವೀಕ್ಷಣೆಗೆ ನಿರ್ಬಂಧ: ಅಳ್ನಾವರ ತಾಲೂಕಿನ ಸುತ್ತಮುತ್ತ ಅತಿಯಾದ ಮಳೆಯಿಂದಾಗಿ ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮದಲ್ಲಿರುವ ಇಂದಿರಮ್ಮನ ಕೆರೆ ತುಂಬಿದೆ. ಕೆರೆ ನಾಲೆಯಿಂದ ಹಾಗೂ ಕೆರೆ ಸೇತುವೆ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಪ್ರವಾಹದ ಸಂಭವ ಇದೆ. ಕೆರೆ ಅಕ್ಕಪಕ್ಕದಲ್ಲಿರುವ ಜಮೀನುಗಳ ರೈತರು ದನ ಕರುಗಳನ್ನು ಕೆರೆಯ ಹತ್ತಿರ ಬಿಡಬಾರದು. ರೈತರು ಜಮೀನುಗಳಲ್ಲಿ ಕೃಷಿ ಚಟುವಟಿಕೆಯನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಇಂದಿರಮ್ಮನ ಕೆರೆ ವಿಕ್ಷಣೆಗೆ ಜನರು ತೆರಳುತ್ತಿದ್ದು, ಕೆರೆ ಅಕ್ಕ ಪಕ್ಕದಲ್ಲಿ ನೀರಿನ ಪ್ರವಾಹ ಬರುವ ಸಂಭವ ಇರುವುದರಿಂದ ವೀಕ್ಷಣೆಗೆ ನಿರ್ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.