

* ಪ್ರಾಚಿನ ಶಾಸನಗಳು ಜೀವಂತ
*ರಸ್ತೆ ಬದಿಯ ಆಲದ ಮರಗಳಿಂದ ಹೆಚ್ಚಿದ ಮೆರುಗು
ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ
ದೇಶದ ಪ್ರತಿಯೊಂದು ಗ್ರಾಮವೂ ತನ್ನದೆಯಾದ ವೈಶಿಷ್ಟ ಹೊಂದಿದೆ. ಅದರಂತೆ ಮಾಗಡಿಯಿಂದ ಸುಮಾರು 26 ಕಿಮೀ ದೂರದಲ್ಲಿರುವ ಹುಲಿಕಲ್ಲು ಸಾಂಸ್ಕೃತಿಕ ಸೊಬಗಿಗೆ ಜೀವಂತ ಸಾಕ್ಷಿಯಾಗಿದ್ದು, ಒಂದೊಂದು ಬೀದಿ, ಕಲ್ಲು, ಕೆರೆ, ಕಟ್ಟೆಗಳು ರೋಚಕ ಕಥೆ ಹೇಳುತ್ತವೆ.
ಮಾಗಡಿ ತಾಲೂಕಿನ ಕುದೂರು ಹೋಬಳಿ ಹುಲಿಕಲ್ಲು ಗ್ರಾಮದ ಗುರುಚಿತ್ತಾ ಆರಾಧ್ಯ ಎಂಬುವರು ವೀರಶೈವ ಧರ್ಮವನ್ನು ದೇಶಪರ್ಯಟನೆ ಮಾಡುವ ವೇಳೆ ತಪ್ಪಸ್ಸು ಮಾಡುತ್ತಿದ್ದಾಗ ಗ್ರಾಮಕ್ಕೆ ಹುಲಿ ಬಂದಿದ್ದು, ಈ ವೇಳೆ ಗುರುಚಿತ್ತಾ ಆರಾಧ್ಯರು ಶಿಷ್ಯ ನಿರಂಜನ ಸ್ವಾಮಿ ಅವರನ್ನು ಹಸುವಿನ ರೂಪದಲ್ಲಿ ಹುಲಿಯನ್ನು ಕೊಲ್ಲಲು ಕಳುಹಿಸಿ, ಈ ವೇಳೆ ಹಸು ಹೋರಾಡಿ ಕೊಂದಿತು. ಇದರಿಂದ ಗ್ರಾಮಕ್ಕೆ ಹುಲಿಕೊಲ್ಲು ಎಂದು ಕರೆಯಲಾಗುತ್ತಿತ್ತು. ಕಾಲ ಕ್ರಮೇಣ ಜನರು ಈಗ ಹುಲಿಕಲ್ಲು ಎಂದು ಕರೆಯುತ್ತಿದ್ದಾರೆ.
ಹುಲಿಯನ್ನು ಹಸುಕೊಂದಿರುವ ಬಗ್ಗೆ ಗ್ರಾಮದ ಸದಾಶಿವಯ್ಯ ಎಂಬುವರ ಮನೆಯ ಬಳಿ ಗುರುಚಿತ್ತಾ ಆರಾಧ್ಯ ಸ್ವಾಮಿ ದೇವಾಲಯದ ಬಳಿ ಹಸುವಿನ ಪ್ರತಿಮೆ ಇದೆ. ಗ್ರಾಮದ 2 ಕಿಮೀ ದೂರದಲ್ಲಿ ಉದ್ಭವ ಶ್ರೀ ಸಿದ್ದರಾಮೇಶ್ವರ, ಪಾರ್ವತಿ ದೇವಿ, ಭದ್ರಕಾಳಿ ಸಮೇತ ವೀರಭದ್ರೇಶ್ವರ ಸ್ವಾಮಿ ಸಮಾಗಮವಾಗಿರುವ ಐತಿಹ್ಯ ಇದೆ.
ಹುಲಿಕಲ್ಲು ಸಾಕಷ್ಟು ಇತಿಹಾಸ ಹೊಂದಿದೆ. ಕೆಲವು ಪ್ರಾಚಿನ ಶಾಸನಗಳನ್ನು ಇಂದಿಗೂ ಗ್ರಾಮದಲ್ಲಿ ಕಾಣಬಹುದಾಗಿದೆ. ಹುಲಿಕಲ್ಲುವಿನಲ್ಲಿ ಪಾಳೆಗಾರರು ಆಳ್ವಿಕೆ ಮಾಡಿದ್ದು, ಗ್ರಾಮದಲ್ಲಿ ಕೋಟೆ, ಮಂದೆಮ್ಮ ಕೋಲಾಪುರದಮ್ಮ, ಗುರುಚಿತ್ತಾರಾಧ್ಯ ಗದ್ದುಗೆ, ಹುಲಿಕಲ್ಲು ಬಸವನ ಸ್ಮಾರಕ ಶಿಲ್ಪ, ಲಕ್ಷ್ಮೀ ಜನಾರ್ದನ, ವೀರಮಾಸ್ತಮ್ಮ, ವೀರಭದ್ರ ಸ್ವಾಮಿ, ಕೋಟೆ ಆಂಜನೇಯ, ಅರುಣಾಚಲೇಶ್ವರ, ಪಾಳೆಯಗಾರರ ಅರಮನೆ, ಕಲ್ಯಾಣಿಗಳನ್ನು ಕಾಣಬಹುದಾಗಿದೆ. ಗ್ರಾಮದಲ್ಲಿ ಗರುಡಗಂಭ ವಿಶೇಷವಾಗಿದ್ದು, ಈ ಗಂಭದ ಮೇಲೆ ದೀಪ ಹಚ್ಚಿದರೆ ಊರಿಗೆಲ್ಲ ಬೆಳಕು ಕಾಣುತ್ತದೆ.
ಸಾಲು ಮರದ ತಿಮ್ಮಕ್ಕ ಅವರ ಊರು ಹುಲಿಕಲ್ಲು ಗ್ರಾಮವಾಗಿದ್ದು, ಕುದೂರುನಿಂದ ಹುಲಿಕಲ್ಲುವರೆಗಿನ ರಸ್ತೆ ಬದಿಯಲ್ಲಿ ಬೆಳೆಸಿರುವ ಆಲದ ಮರಗಳು ಇಂದು ಹೆಮ್ಮರವಾಗಿದ್ದು, ಈ ಮರಗಳಿಂದಲ್ಲೂ ಹುಲಿಕಲ್ಲು ಗ್ರಾಮದ ಸೋಬಗು ಹೆಚ್ಚಿದೆ.
ಗ್ರಾಮದಲ್ಲಿ 16 ಮಠಗಳು, 16 ದೇವಾಲಯಗಳಿವೆ. 16 ಮಠಗಳಲ್ಲಿ ಈಗ ಶುಠಿ ಮಠ, ತೋಪಿ ಮಠ ಮಾತ್ರ ಉಳಿದಿದೆ. ಇತ್ತೀಚೆಗೆ ವೀರಮಾಸ್ತಮ್ಮ ಸಮುದಾಯ ಭವನ ಉದ್ಘಾಟಿಸಿದ ಸಿರಿಗೆರೆ ಶ್ರೀಗಳು ಮಠಗಳಿಗೆ ಭೇಟಿ ನೀಡಿ ಜೀಣೋರ್ದ್ಧಾರ ಮಾಡಲು ಮುಂದಾಗಿದ್ದಾರೆ. ಗ್ರಾಮದ ಬಳಿ ತಮ್ಮೆನಹಳ್ಳಿ ಕೆರೆ, ಹಿರೆಕೆರೆಗಳು ದೊಡ್ಡ ಕೆರೆಗಳಾಗಿದ್ದು, ಈ ಕೆರೆಯಿಂದ ಸಾವಿರಾರು ರೈತರಿಗೆ ಅನುಕೂಲವಾಗಿದೆ. ಪಾಳೆಗಾರರ ಕೋಟೆ ಇದ್ದು, ಅವರ ವಂಶಸ್ಥ ಚಿಕ್ಕಪ್ಪಯ್ಯ ಎಂಬುವರು ವಾಸವಿದ್ದಾರೆ.
ಹುಲಿಕಲ್ಲು ಗ್ರಾಮ 2 ಸಾವಿರ ಕುಟುಂಬಗಳಿದ್ದು, ಸರ್ವಜನಾಂಗದ ಶಾಂತಿಯ ತೋಟದಂತೆ ಇಲ್ಲಿನ ಜನರು ಐಕ್ಯತೆ, ಸಹಬಾಳ್ವೆಯ ಜೀವನ ನಡೆಸುತ್ತಿದ್ದಾರೆ. ಯುಗಾದಿ ಆದ 15 ದಿನದ ನಂತರ ಐದು ದಿನ ಗ್ರಾಮದೇವತೆ ಮಂದೇಮ್ಮ, ಕೋಲಾಪುರದಮ್ಮ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ.
ಗ್ರಾಮದಲ್ಲಿ ಬಹುತೇಕ ಮಂದಿ ರೈತರೇ ಇದ್ದು, ಹೈನುಗಾರಿಕೆ, ವ್ಯವಸಾಯ, ತೋಟಗಾರಿಗೆ ಹೆಚ್ಚು ಒತ್ತು ನೀಡಿದ್ದಾರೆ. ಪಶು ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ, ಹಾಸ್ಟೆಲ್ಗಳ ಸೌಲಭ್ಯ ಅಗತ್ಯತೆ ಇದೆ. ಗ್ರಾಮವನ್ನು ಪ್ರವಾಸಿ ತಾಣ ಮಾಡಲು ಜನ ಪ್ರತಿನಿಧಿಗಳು ಮುಂದಾಗದಿರುವುದು ಸ್ಥಳಿಯರಲ್ಲಿ ಬೇಸರ ಮೂಡಿಸಿದೆ.
ಪ್ರಾಚಿನ ಕಾಲದ ಹುಲಿಕಲ್ಲು ಗ್ರಾಮ ಕೋಟೆ, ಮಠ, ದೇವಾಲಯಗಳಿಂದ ತುಂಬಿಕೊಂಡು ಸಾಕಷ್ಟು ವೈವಿದ್ಯತೆಯಿಂದ ಕೂಡಿದೆ. ಗ್ರಾಮದ ವೀಕ್ಷಣೆಗೆ ಪ್ರತಿ ನಿತ್ಯ ಸಾಕಷ್ಟು ಮಂದಿ ಆಗಮಿಸುತ್ತಿದ್ದಾರೆ. ಸರ್ಕಾರ ಗ್ರಾಮವನ್ನು ಪ್ರವಾಸಿ ತಾಣವನ್ನಾಗಿ ಮಾಡಿ ಅಭಿವೃದ್ಧಿಗೊಳಿಸಿದರೆ ಸಾಲುಮರದ ತಿಮ್ಮಕ್ಕೆ ಅವರಿಗೆ ಗೌರವ ಸಿಗುತ್ತದೆ.
ತಿಪ್ಪೇರುದ್ರಯ್ಯ, ಸ್ಥಳಿಯ.