ಹುಲಿಗೆಮ್ಮ ಸಮ್ಮುಖದಲ್ಲಿ ಆಣೆ-ಪ್ರಮಾಣ

11-msk-1
Published on

ಮಸ್ಕಿ: ಗುಡುದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದರು. ಆದರೆ, ಕೆಲ ಸದಸ್ಯರು ಚುನಾವಣೆಯಲ್ಲಿ ಬೆಂಬಲ ನೀಡಿಲ್ಲ ಎಂಬ ಕಾರಣಕ್ಕೆ ಅವರಿಂದ ಕೊಪ್ಪಳ ಜಿಲ್ಲೆಯ ಹುಲಿಗಿಯಲ್ಲಿ ಆಣೆ-ಪ್ರಮಾಣ ಮಾಡಿಸಲಾಗಿದೆ.

ಗ್ರಾಮ ಪಂಚಾಯಿತಿಯ 25 ಸದಸ್ಯರ ಪೈಕಿ ಬಿಜೆಪಿ ಬೆಂಬಲಿತ 18 ಜನ 40 ದಿನ ಪ್ರವಾಸಕ್ಕೆ ತೆರಳಿದ್ದರು. ಆ.2 ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಾರಮ್ಮ ಹುಲುಗಪ್ಪ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಾಗಿ ಶಾಂತಮ್ಮ ಶಾಂತಪ್ಪ ನಾಮಪತ್ರ ಸಲ್ಲಿಸಿದ್ದರು.

ಬಿಜೆಪಿ ಬೆಂಬಲಿತ ಮಾರಮ್ಮ 13 ಮತ ಪಡೆದು ಗೆಲುವು ಸಾಧಿಸಿದರೆ ಕಾಂಗ್ರೆಸ್ ಬೆಂಬಲಿತ ಶಾಂತಮ್ಮ 10 ಮತ ಪಡೆದಿದ್ದರು. ಬಿಜೆಪಿ ಬೆಂಬಲಿತ 18 ಸದಸ್ಯರಿದ್ದರೂ 13 ಮತ ಬಂದಿದ್ದು ಪಕ್ಷದ ಪ್ರಮುಖರ ಅಸಮಾಧಾನಕ್ಕೆ ಕಾರಣವಾಗಿತ್ತು. ಸದಸ್ಯರ ಪ್ರವಾಸಕ್ಕೆ ಹಣ ಖರ್ಚು ಮಾಡಿದ್ದ ಬಿಜೆಪಿ ಪ್ರಮುಖರು ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಸದಸ್ಯರನ್ನು ಪತ್ತೆ ಹಚ್ಚಲು ಆಣೆ-ಪ್ರಮಾಣದ ಮೊರೆ ಹೋಗಿದ್ದರು.

ಈ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ 18 ಸದಸ್ಯರನ್ನು ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರು. ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಸೇರಿ ಎಲ್ಲ 18 ಸದಸ್ಯರು ಹುಲಿಗೆಮ್ಮ ದೇವಸ್ಥಾನದಲ್ಲಿ ಮಾರಮ್ಮ ಹುಲುಗಪ್ಪಗೆ ಮತ ಹಾಕಿರುವುದಾಗಿ ದೀಪ ಬೆಳಗಿಸುವ ಮೂಲಕ ಪ್ರಮಾಣ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net