

ಕೊಪ್ಪಳ: ಕರೊನಾ ಹಾವಳಿಯಿಂದಾಗಿ ಜಾರಿಗೊಳಿಸಲಾಗಿದ್ದ ಲಾಕ್ಡೌನ್ಗೆ ದೇವಸ್ಥಾನಗಳೂ ಹೊರತಾಗಿರಲಿಲ್ಲ. ಆದರೆ ಹಂತಹಂತದ ಅನ್ಲಾಕ್ ಹಿನ್ನೆಲೆಯಲ್ಲಿ ದೇವಸ್ಥಾನಗಳು ಒಂದೊಂದಾಗಿ ತೆರೆಯಲಾರಂಭಿಸಿವೆ. ಹೀಗಾಗಿ ಪ್ರಸಿದ್ಧಿ ಪಡೆದಿರುವ ಕ್ಷೇತ್ರ, ಕೊಪ್ಪಳದ ಮುನಿರಾಬಾದ್ನ ಹುಲಿಗಿ ಗ್ರಾಮದ ಹುಲಿಗೆಮ್ಮ ಭಕ್ತರಿಗೂ ದರ್ಶನ ಭಾಗ್ಯ ಲಭಿಸಿದೆ.
ವಿಶೇಷ ಎಂದರೆ ಬರೊಬ್ಬರಿ ಏಳು ತಿಂಗಳ ನಂತರ ಹುಲಿಗೆಮ್ಮ ದೇವಿ ತನ್ನ ಭಕ್ತರಿಗೆ ದರ್ಶನ ನೀಡಿದ್ದಾಳೆ. ಇಂದು ಬೆಳಗ್ಗೆ ದೇವಸ್ಥಾನದ ಮಹಾದ್ವಾರಕ್ಕೆ ಪೂಜೆ ಸಲ್ಲಿಸುವ ಮೂಲಕ ದೇವಾಲಯ ಮತ್ತೆ ತೆರೆಯಲಾಗಿದ್ದು, ಭಕ್ತರ ಪ್ರವೇಶಕ್ಕೆ ಮುಕ್ತವಾಗಿದೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ದೈಹಿಕ ಅಂತರ ಕಾಪಾಡುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಬೇಕಿದೆ. ಅಲ್ಲದೆ ಗರ್ಭಗುಡಿ ಪ್ರವೇಶಕ್ಕೆ ನಿಷೇಧವಿದ್ದು, ಭಕ್ತರು ಹೊರಗಡೆಯಿಂದಷ್ಟೇ ದರ್ಶನ ಪಡೆಯಬಹುದು. ಕೋವಿಡ್-19 ಸೋಂಕು ವ್ಯಾಪಿಸಿದ ಹಿನ್ನೆಲೆಯಲ್ಲಿ ಮಾರ್ಚ್ 20ರಿಂದ ನವೆಂಬರ್ 04ರ ವರೆಗೆ ಹುಲಿಗೆಮ್ಮ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿತ್ತು.
ಕರ್ನಾಟಕದ ವಿವಿಧೆಡೆ ಮಾತ್ರವಲ್ಲದೆ ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹಾಗೂ ವಿದೇಶದಿಂದಲೂ ಲಕ್ಷಾಂತರ ಭಕ್ತರನ್ನು ಹೊಂದಿರುವ ಹುಲಿಗೆಮ್ಮ ದೇವಿ ದೇವಸ್ಥಾನ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಸದ್ಯ ಚಿಕ್ಕಮಕ್ಕಳಿಗೆ, ವೃದ್ಧರಿಗೆ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ದರ್ಶನಕ್ಕೆ ಅವಕಾಶವಿಲ್ಲ. ಜತೆಗೆ ದೇವಸ್ಥಾನದಲ್ಲಿ ಭಕ್ತರಿಗೆ ಉಳಿದುಕೊಳ್ಳಲು ಕೂಡ ನಿಷೇಧವಿದ್ದು, ದಾಸೋಹ ಪ್ರಸಾದ ವ್ಯವಸ್ಥೆ ಕೂಡ ಸದ್ಯಕ್ಕೆ ಇರುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.