ಹುಲಿ ದಾಳಿ ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ

HUN-AUG-13-1(FOREST DEPT MEETING)
ಹುಣಸೂರು ನಗರದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಡಿಸಿಎಫ್ ಪಿ.ಎ.ಸೀಮಾ ಮಾತನಾಡಿದರು. ಡಿಸಿಎಫ್ ನವೀನ್ ಕುಮಾರ್, ಎಸಿಎಫ್ ಲಕ್ಷ್ಮೀಕಾಂತ್, ಪ್ರಭಾರ ಎಸಿಎಫ್ ಮಹಾಲಕ್ಷ್ಮೀ ಇದ್ದರು.
Published on

ಹುಣಸೂರು: ಹುಲಿ ದಾಳಿಗೆ ಮೃತಪಟ್ಟ ಕುಟುಂಬಕ್ಕೆ ಸರ್ಕಾರ ನೀಡುತ್ತಿದ್ದ 15 ಲಕ್ಷ ರೂ. ಪರಿಹಾರವನ್ನು ಇದೀಗ 20 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್) ಪಿ.ಎ.ಸೀಮಾ ಮಾಹಿತಿ ನೀಡಿದರು.

ನಗರದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಕಚೇರಿ ಆವರಣದಲ್ಲಿ ಬುಧವಾರ ರೈತರೊಂದಿಗೆ ಆಯೋಜಿಸಿದ್ದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಇಲಾಖೆ ಹಲವು ಕ್ರಮಗಳನ್ನು ಜಾರಿಗೆ ತಂದಿದೆ. ಹೀಗಿದ್ದೂ ಕೆಲವೊಂದು ಅವಘಡಗಳು ನಮ್ಮೆಲ್ಲರ ಕೈಮೀರಿ ನಡೆಯುತ್ತಿವೆ. ವನ್ಯಜೀವಿ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರ ನೀಡುತ್ತಿದ್ದ 15 ಲಕ್ಷ ರೂ. ಪರಿಹಾರವನ್ನು ಮೂರು ತಿಂಗಳ ಹಿಂದೆ 20 ಲಕ್ಷ ರೂ.ಗೆ ಏರಿಸಿದೆ. ರೈತ ಸಮುದಾಯ 25 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದು, ಸರ್ಕಾರ ಈ ಕುರಿತು ನಿರ್ಧರಿಸಲಿದೆ ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ವನ್ಯಜೀವಿಗಳಿಂದ ಬೆಳೆ ನಾಶವಾದಲ್ಲಿ ಅದಕ್ಕೆ ಇಲಾಖೆ ಶೀಘ್ರ ಮತ್ತು ನ್ಯಾಯಯುತ ಪರಿಹಾರ ನೀಡಬೇಕು. ಹುಣಸೂರು ಉಪವಿಭಾಗ ವ್ಯಾಪ್ತಿಯಲ್ಲಿ ಬೆಳೆ ನಾಶ ಪರಿಹಾರ ಬಾಕಿ ಉಳಿಸಿಕೊಂಡಿದ್ದೀರಿ ಎಂದು ದೂರಿದರು.

ಆರ್‌ಎಫ್‌ಒ ನಂದಕುಮಾರ್ ಮಾತನಾಡಿ, ಪ್ರಸ್ತುತ ವರ್ಷದ ಏಪ್ರಿಲ್ ತಿಂಗಳವರೆಗೂ ಬೆಳೆ ನಾಶ ಪ್ರಕರಣಗಳ ಪರಿಹಾರ ಹಣವನ್ನು ವಿತರಿಸಲಾಗಿದೆ. ಪರಿಹಾರ ತೆಗೆದುಕೊಳ್ಳದಿರುವವರು ಇದ್ದರೆ ಮಾಹಿತಿ ನೀಡಿದ್ದಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಡಿಸಿಎಫ್ ಸೀಮಾ ಮಾತನಾಡಿ, ಜಾನುವಾರುಗಳ ಸಾವಿಗೆ 30 ಸಾವಿರ ರೂ.ಪರಿಹಾರ ನೀಡಲಾಗುತ್ತಿದೆ. ಕಾಡುಹಂದಿ ದಾಳಿಯಿಂದ ಬೆಳೆ ನಾಶವಾದರೂ ಪರಿಹಾರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೋತಿಗಳನ್ನು ಹಿಡಿಯುವವರ‌್ಯಾರು?: ಸಭೆಯಲ್ಲಿ ಕೋತಿಗಳ ಹಾವಳಿ ನಿಯಂತ್ರಿಸುವ ಜವಾಬ್ದಾರಿ ಯಾರದ್ದು ಎನ್ನುವ ಪ್ರಶ್ನೆ ಅಧಿಕಾರಿಗಳು ಮತ್ತು ರೈತರ ನಡುವೆ ಜಟಾಪಟಿಗೆ ಕಾರಣವಾಯಿತು.

ಹುಣಸೇಗಾಲ ಗೋವಿಂದೇಗೌಡ ಮಾತನಾಡಿ, ನಾಲ್ಕೈದು ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ ಕೋತಿಗಳ ಹಾವಳಿಯಿಂದಾಗಿ ಬೆಳೆ ನಷ್ಟವಾಗಿರುವ ಕುರಿತು ಇಲಾಖೆಗೆ ತಿಳಿಸಿದಾಗ ಕೋತಿಗಳನ್ನು ಹಿಡಿಯುವುದು ಗ್ರಾ.ಪಂ. ಜವಾಬ್ದಾರಿಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿತು.ಆದರೆ ಗ್ರಾಮೀಣಾಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳು ನಮ್ಮ ಜವಾಬ್ದಾರಿಯಲ್ಲ ಎಂದು ಕೈಚೆಲ್ಲಿದರು. 7 ಲಕ್ಷ ರೂ. ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲು ಏರಿದ್ದೇನೆ. ನನಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದರು.

ರೈತ ಬಸವೇಗೌಡ, ನಮ್ಮ ಭಾಗದಲ್ಲೂ ಕೋತಿ ಹಾವಳಿಯಿಂದಾಗಿ ಬೆಳೆ ನಾಶವಾಗುತ್ತಿದೆ ಎಂದು ದೂರಿದರು.

ಎಸಿಎಫ್ ಲಕ್ಷ್ಮೀಕಾಂತ್ ಮಾತನಾಡಿ, ಸರ್ಕಾರದ ಸುತ್ತೋಲೆ ಪ್ರಕಾರ ಕೋತಿಗಳನ್ನು ಹಿಡಿಯುವ ಕಾರ್ಯ ಗ್ರಾ.ಪಂ.ನದ್ದಾಗಿದ್ದು, ಈ ಕುರಿತು ತಾಲೂಕು ಪಂಚಾಯಿತಿ ಇಒಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.

ಸಮಿತಿಯ ಮೂಲ ಕಡತಗಳನ್ನು ಪರಿಶೀಲಿಸಬೇಕಿದ್ದು, ಶೀಘ್ರ ಕ್ರಮವಹಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಡಿಸಿಎಫ್(ಪ್ರಾದೇಶಿಕ) ನವೀನ್‌ಕುಮಾರ್, ಎಸಿಎಫ್ ಮಹದೇವಸ್ವಾಮಿ, ಪ್ರಭಾರ ಎಸಿಎಫ್‌ಗಳಾದ ಮಹಾಲಕ್ಷ್ಮೀ, ಎನ್.ಮಹಾಲಕ್ಷ್ಮೀ, ಆರ್‌ಎಫ್‌ಒಗಳಾದ ಸುಬ್ರಮಣ್ಯ, ಡಿಆರ್‌ಎಫ್‌ಒಗಳಾದ ಮಲ್ಲಿಕಾರ್ಜುನ , ಎಚ್.ಡಿ.ಕೋಟೆ ತಾಲೂಕು ರೈತ ಸಂಘದ ಅಧ್ಯಕ್ಷ ಮಹದೇವನಾಯಕ, ಹುಣಸೂರು ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ರಾಮಕೃಷ್ಣ, ಬಸವರಾಜೇಗೌಡ, ಚಿಕ್ಕಹುಣಸೂರು ರಾಜು, ಯೋಗೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net