

ಹುಲಸೂರು: ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಂಠಿತವಾಗಬಾರದು. ಸುಧಾರಣೆಗೆ ಬೇಕಾಗುವ ಎಲ್ಲ ಅಗತ್ಯ ಸೌಲಭ್ಯ ಪಡೆದು ತಾಲೂಕು ಅಷ್ಟೇ ಅಲ್ಲ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವಂತೆ ಮಾಡಬೇಕು ಎಂದು ತಹಸೀಲ್ದಾರ್ ಶಿವಾನಂದ ಮೇತ್ರೆ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆ ಮಕ್ಕಳ ಶೈಕ್ಷಣಿಕ ಜೀವನದ ಮಹತ್ವದ ಮೊದಲ ಘಟ್ಟ. ನಿಮಗೆ ಒಳ್ಳೆಯ ಶಿಕ್ಷಕರು ದೊರೆತಿದ್ದು, ಅವರ ಮಾರ್ಗದರ್ಶನದಲ್ಲಿ ಉತ್ತಮ ಫಲಿತಾಂಶ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಶಿವರಾಜ ಖಪಲೆ ಮಾತನಾಡಿ, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಶಿಕ್ಷಕರು ಬೋಧಿಸುವ ಪಾಠ ಸರಿಯಾಗಿ ಆಲಿಸಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಮುಖ್ಯಗುರು ಸೂರ್ಯಕಾಂತ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಕಂದಾಯ ನಿರೀಕ್ಷಕ ಶರಣು ಪವಾಡಶೆಟ್ಟೆ, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಅಡಕೆ, ಪ್ರಮುಖರಾದ ಕೃಷ್ಣಾರೆಡ್ಡಿ, ಬಾಲಾಜಿ ಜಾಧವ್, ಕುಪ್ಪಣ್ಣ ಯಾಚೆ ಇತರರಿದ್ದರು. ದೇವಿಂದ್ರ ನಂಜವಾಡೆ ಸ್ವಾಗತಿಸಿ ನಿರೂಪಣೆ ಮಾಡಿದರು.
ವರ್ಗಾವಣೆಯಾದ ಸಹ ಶಿಕ್ಷಕರಾದ ನಾಗಣ್ಣ ಮೈಲಾರೆ ಹಾಗೂ ನವೀನಕುಮಾರ ದಾಮಾ ಅವರನ್ನು ಸನ್ಮಾನಿಸಲಾಯಿತು. ಹೊಸದಾಗಿ ಬಂದ ಶಿಕ್ಷಕರಾದ ದೇವಿಂದ್ರ ನಂಜವಾಡೆ, ಮತ್ತು ಅಹ್ಮದ್ ಅಲಿ ಅವರನ್ನು ಸ್ವಾಗತಿಸಲಾಯಿತು. ಪ್ರತಿಭಾ ಕಾರಂಜಿಯಲ್ಲಿ ಪ್ರತಿಭೆ ಮೆರೆದ ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಲಾಯಿತು.