

ಹುಲಸೂರು: ಜಿಲ್ಲೆಯ ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್)ಗಳು ವಿವಿಧ ಸೌಲಭ್ಯ ಒದಗಿಸುವ ಮೂಲಕ ಆಧಾರ ಸ್ತಂಭಗಳಾಗಿವೆ ಎಂದು ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.
ಪಟ್ಟಣದ ಗುರುಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಪಿಕೆಪಿಎಸ್ ೬೮ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಸ್ಥಳೀಯ ಪಿಕೆಪಿಎಸ್ ಆಡಳಿತ ಮಂಡಳಿ ಸಹಕಾರದಿಂದ ಹೆಮ್ಮರವಾಗಿ ಬೆಳೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘಗಳಿಂದ ಉದ್ದು, ಹೆಸರು, ತೊಗರಿ ಧಾನ್ಯ ಬೆಂಬಲ ಬೆಲೆಗೆ ಪಡೆಯಲು ಖರೀದಿ ಕೇಂದ್ರ ಆರಂಭಿಸಿದ್ದು, ಕೃಷಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಡಿಸಿಸಿ ಬ್ಯಾಂಕ್ ನಿರ್ದೇಶಕ ಓಂಕಾರ ಪಟ್ನೆ ಮಾತನಾಡಿ, ಸಂಘವು ೨೦೨೩- ೨೪ರಲ್ಲಿ ೩ ಕೋಟಿ ರೂ. ವಹಿವಾಟು ನಡೆಸಿ ೩೫ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಘವನ್ನು ಜಿಲ್ಲೆಯಲ್ಲೇ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲು ಸದಸ್ಯರ ಸಹಕಾರ ಅಗತ್ಯವಾಗಿದೆ. ಸಂಘದ ವ್ಯಾಪ್ತಿಯಲ್ಲಿ ಸೋಲದಾಬಕಾ ಗ್ರಾಮದಲ್ಲಿ ಉಗ್ರಾಣ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮಲ್ಲಪ್ಪ ಧಬಾಲೆ, ಸುಧೀರ ಕಾಡಾದಿ ಮಾತನಾಡಿದರು. ವೀರಭದ್ರೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಾಶೀನಾಥ ಪಾರಶೆಟ್ಟಿ, ಕರಣ ಕೃಷ್ಣಾಜಿ, ಪಿಕೆಪಿಎಸ್ ಉಪಾಧ್ಯಕ್ಷ ಕಾಶಿನಾಥ ಪಾಟೀಲ್, ನಿರ್ದೇಶಕರಾದ ಬಸವರಾಜ ಜಡಗೆ, ಬಸವರಾಜ ಹಾರಕೂಡೆ, ರೂಪವತಿ ಜಾಧವ್, ಎಂ.ಜಿ. ರಾಜೋಳೆ, ಗುಣವಂತ ಹಲಸೆ, ಅಶೋಕ ಮೇತ್ರೆ, ಹೀರು ಪವಾರ್, ಜನಾಬಾಯಿ ಬಿರಾದಾರ, ಲಕ್ಷ್ಮೀಬಾಯಿ ಬಂಗ, ಕ್ಷೇತ್ರ ಸಹಾಯಕ ಶಾಂತಪ್ಪ ಪಾಟೀಲ್, ಸಿಇಒ ನಂದಕುಮಾರ ಮುಸ್ತಾಪುರೆ ಇತರರಿದ್ದರು.
ರಾಜಕುಮಾರ ಹೊನ್ನಾಡೆ ಸ್ವಾಗತಿಸಿ ನಿರೂಪಣೆ ಮಾಡಿದರು. ರಮಾಕಾಂತ ತೋಟದ ವಾರ್ಷಿಕ ವರದಿ ಮಂಡಿಸಿದರು. ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಓಂಕಾರ ಪಟ್ನೆ ಅವರನ್ನು ಮಾಚನಾಳ ಗ್ರಾಮಸ್ಥರಿಂದ ಸನ್ಮಾನಿಸಿ ಗೌರವಿಸಲಾಯಿತು.