ಹುಲಕೋಟಿ: "ಅನ್ನದಾನಕ್ಕಿಂತಲೂ ಶ್ರೇಷ್ಠವಾದ ದಾನ ವಿದ್ಯಾದಾನ .ಇದು ಜೀವನ ಪರ್ಯಂತಲೂ ಇರುವಂತಹ ಅನ್ನವನ್ನು ಕಟ್ಟಿಕೊಡುತ್ತದೆ, ಇಂತಹ ವಿದ್ಯೆಯನ್ನು ಪಡೆಯಬೇಕಾದರೆ ಸತತ ಪರಿಶ್ರಮ ಸಾಧಿಸುವ ಛಲ ಹೊಂದಬೇಕು ಅಂದಾಗ ಮಾತ್ರ ವಿದ್ಯೆ ಕಲಿತು ಗುರಿ ಮುಟ್ಟಲು ಸಾಧ್ಯ". ಎಂದು ಶ್ರೀ ರಂಭಾಪುರಿ ವೀರ ಗಂಗಾಧರ ಸರ್ಕಾರಿ ಪ್ರೌಢಶಾಲೆ ಲಕ್ಷ್ಮೇಶ್ವರದ ಪ್ರಾಚಾರ್ಯರಾದ ಶ್ರೀಮತಿ ಡಾII ಜಯಶ್ರೀ ಹೊಸಮನಿ ಅವರು ದಿನಾಂಕ 30 -11 -2024 ರಂದು ಜರುಗಿದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿದರು.
ವಾರ್ಷಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿದಂತಹ ಡಾ||ಎಸ್ .ಆರ್. ನಾಗನೂರ ರವರು "ಜಾಗತೀಕರಣದಿಂದಾಗಿ ಜಗತ್ತು ಅವಕಾಶಗಳ ಆಗರವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಅದೃಷ್ಟವನ್ನು ಅವಲಂಬಿಸಿ ಬದುಕುವುದನ್ನು ಬಿಟ್ಟು ಕಠಿಣ ಪರಿಶ್ರಮದಿಂದ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬೇಕು". ಎಂದು ಹೇಳಿದರು.
ಕಾರ್ಯಕ್ರಮವು ಕುಮಾರಿ ವಿದ್ಯಾ ಸೈದಾಪುರ ಹಾಗೂ ಸಂಗಡಿಗರ ಸ್ವಾಗತ ನೃತ್ಯದೊಂದಿಗೆ ಪ್ರಾರಂಭವಾಯಿತು, ಕುಮಾರಿ ಸ್ಪಂದನಾ ಮೇಕಳೆ ಹಾಗೂ ಸಂಗಡಿಗರು ನಾಡಗೀತೆಯನ್ನು ಹಾಡಿದರು. ಕುಮಾರಿ ರೋಜಾ ಕಾತರಕಿ ಎಲ್ಲರನ್ನು ಸ್ವಾಗತಿಸಿದಳು. ಕುಮಾರಿ ಪವಿತ್ರ ಮಾಡಳ್ಳಿ ಅತಿಥಿಗಳ ಪರಿಚಯ ಮಾಡಿದಳು. ಪ್ರಾಚಾರ್ಯರಾದ ಶ್ರೀಮತಿ ಪ್ರಿಯಾ ಪಾಟೀಲರು ಕಾಲೇಜಿನ ವಾರ್ಷಿಕ ವರದಿ ವಾಚನ ಮಾಡಿದರು. 2022-23 ನೇ ಸಾಲಿನ ಪ್ರಥಮ ಪಿಯು ಹಾಗೂ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕಗಳನ್ನು ವಿತರಿಸಿ ಸನ್ಮಾನಿಸಲಾಯಿತು. ಅದೇ ರೀತಿ ಕಾಲೇಜಿನಲ್ಲಿ ಸದನವಾರು ನಡೆದ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಅತಿ ಹೆಚ್ಚು ಅಂಕಗಳಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಸದನಗಳನ್ನು ಮುಖ್ಯ ಅತಿಥಿಗಳು ಘೋಷಿಸಿ, ಸದನಗಳ ಮುಖ್ಯಸ್ಥರು ಹಾಗೂ ಕ್ಯಾಪ್ಟನ್ ಗಳಿಗೆ ಪ್ರಶಸ್ತಿ ಪತ್ರ ಮತ್ತು ಪಾರಿತೋಷಕಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿ ಯು ವಿದ್ಯಾರ್ಥಿಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕುಮಾರಿ ಜ್ಯೋತಿ ಗೊರವರ ಹಾಗೂ ಕುಮಾರ ಪ್ರಶಾಂತ ಮುಂಡಾಸದ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆ ಮಾಡಿದರು. ಕುಮಾರ ಮಿಥುನ ಜನಗಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟನು. ಕುಮಾರಿ ಶ್ರೀತನು ಅಂಗಡಿ ಹಾಗೂ ಪ್ರಶಾಂತ ಮುಂಡಾಸದ ಕಾರ್ಯಕ್ರಮದ ನಿರೂಪಣೆ ಮಾಡಿದರು. ಕುಮಾರಿ ಪ್ರೀತಿ ಜಕರಡ್ಡಿ ಎಲ್ಲರನ್ನು ವಂದಿಸಿದಳು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸರ್ವ ಸದಸ್ಯರು, ಸ್ಥಳೀಯ ಎಲ್ಲ ಶಾಲಾ ಕಾಲೇಜುಗಳ ಶಿಕ್ಷಕರು , ಕಾಲೇಜಿನ ಉಪನ್ಯಾಸಕ ಸಿಬ್ಬಂದಿ ಹಾಗೂ ಉಪನ್ಯಾಸಕೇತರ ಸಿಬ್ಬಂದಿ ವರ್ಗದವರು ಹಾಗೂ ಎಲ್ಲ ಪಾಲಕರು /ಪೋಷಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.