

ಹುಬ್ಬಳ್ಳಿ: ಹತ್ಯೆಯಾದ ಅಂಜಲಿ ಅಂಬಿಗೇರ ಅವರ ಮನೆಗೆ ಸೋಮವಾರ ಭೇಟಿ ನೀಡಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು, ಶಿವದೀಕ್ಷೆ ವೇಳೆ ವಟುಗಳ ಜೋಳಿಗೆಯಲ್ಲಿ ಸಂಗ್ರಹವಾಗಿದ್ದ 50 ಸಾವಿರ ರೂ. ಚೆಕ್ ಅನ್ನು ಅಂಜಲಿ ಕುಟುಂಬಕ್ಕೆ ನೀಡಿದರು.
ಶ್ರೀ ಗುರುಶಾಂತೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ಬೆಳಗಾವಿ ಹುಕ್ಕೇರಿ ಹಿರೇಮಠದಲ್ಲಿ ಇತ್ತೀಚೆಗೆ ಶಿವದೀಕ್ಷೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ವಟುಗಳ ಜೋಳಿಗೆಗೆ ಭಕ್ತರು ಹಣ ನೀಡಿದ್ದರು. ಒಟ್ಟು 50 ಸಾವಿರ ರೂ. ಸಂಗ್ರಹವಾಗಿತ್ತು. ಇದರ ಚೆಕ್ ಅನ್ನು ಅಂಜಲಿ ಅಜ್ಜಿ ಗಂಗಮ್ಮ ಅವರಿಗೆ ನೀಡಿದರು.
ನಂತರ ಮಾತನಾಡಿದ ಶ್ರೀಗಳು, ವಿರಶೈವ ಧರ್ಮದ ಮಠಗಳು ಕೇವಲ ಪೂಜೆ-ಪುನಸ್ಕಾರ ಮಾಡಲು ಸೀಮಿತವಾಗದೆ ಕಷ್ಟದಲ್ಲಿ ನೊಂದ ಕುಟುಂಬಕ್ಕೆ ನೆರವುವಾಗುವ ಕಾರ್ಯ ಮಾಡುತ್ತಿವೆ. ಇವತ್ತು ಹುಕ್ಕೇರಿ ಹಿರೇಮಠದಲ್ಲಿ ನಡೆದ ಶಿವದೀಕ್ಷೆಯಲ್ಲಿ ವಟುಗಳ ಜೋಳಿಗೆಯಲ್ಲಿ ಬಂದಂತಹ ಹಣವನ್ನು ಮೃತ ಅಂಜಲಿ ಅಂಬಿಗೇರ ಕುಟುಂಬಕ್ಕೆ ನೀಡಿದ್ದೇವೆ. ಸರ್ಕಾರ ಕೂಡಲೇ ಹಂತಕರಿಗೆ ಮರಣ ದಂಡನೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ನೇಹಾ ತಂದೆ ನಿರಂಜನ ಹಿರೇಮಠ ಇತರರು ಇದ್ದರು.