ಹುಕ್ಕೇರಿ ಲಾಕ್‌ಡೌನ್‌ಗೆ ತೀರ್ಮಾನ

16Huk11-WEb
ಹುಕ್ಕೇರಿಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಕರೊನಾ ನಿಯಂತ್ರಣಕ್ಕಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಶಾಸಕ ಉಮೇಶ ಕತ್ತಿ ಮಾತನಾಡಿದರು. ನೋಡಲ್ ಅಧಿಕಾರಿ ರವೀಂದ್ರ ಹಕಾಟಿ, ತಹಸೀಲ್ದಾರ್ ಅಶೋಕ ಗುರಾಣಿ ಇತರು ಇದ್ದರು.
Published on

ಹುಕ್ಕೇರಿ: ಹುಕ್ಕೇರಿ ಪಟ್ಟಣ, ತಾಲೂಕಿನ ಕೆಲ ಗ್ರಾಮಗಳಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಅದರ ನಿಯಂತ್ರಣಕ್ಕಾಗಿ ಜು. 20ರಿಂದ 27ರವರೆಗೆ ಒಂದುವಾರ ತಾಲೂಕನ್ನು ಲಾಕ್‌ಡೌನ್ ಸಂಪೂರ್ಣ ಮಾಡಲು ಶಾಸಕ ಉಮೇಶ ಕತ್ತಿ ತಾಲೂಕಾಡಳಿತಕ್ಕೆ ಸೂಚಿಸಿದರು.

ಸ್ಥಳೀಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಅಧಿಕಾರಿ ಗಳ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತ ನಾಡಿದರು. ಇಲ್ಲಿಯವರೆಗೆ ಅಧಿಕಾರಿಗಳ ಶ್ರಮದಿಂದ ಯಾವ ಕರೊನಾ ವೈರಸ್ ವರದಿಯೂ ಬಂದಿರಲಿಲ್ಲ. ಆದರೆ, ಈಚೆಗೆ ಪಟ್ಟಣದ ಬೇಪಾರಿ ಗಲ್ಲಿಯ ಮಹಿಳೆಯೋರ್ವಳು ಕರೊನಾ ವೈರಸ್‌ನಿಂದ ಮೃತಪಟ್ಟಿದ್ದಾಳೆ. ಆ ಘಟನೆ ಮಾಸುವ ಮುನ್ನವೇ ಸುಣಗಾರಗಲ್ಲಿಯ ಓರ್ವ ಕಿರಾಣಿ ವ್ಯಾಪಾರಸ್ಥನಿಗೆ ಸೋಂಕು ತಗುಲಿದೆ.

ಇದರ ಜತೆಗೆ ತಾಲೂಕಿನ ಕೆಲ ಗ್ರಾಮಗಳಲ್ಲೂ ಕರೊನಾ ಸೋಂಕಿನ ಪ್ರಕರಣ ವರದಿಯಾಗುತ್ತಿವೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು. ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಬೇಕು. ಅನವಶ್ಯಕವಾಗಿ ತಿರುಗಾಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆಗೆ ಆದೇಶಿಸಿದರು.

ಕರೊನಾ ರೋಗ ಹರಡವುದನ್ನು ತಡೆಯಲು ಪಟ್ಟಣ ಸೇರಿದಂತೆ ತಾಲೂಕಿನ ಜನ ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್‌ಗೆ ಸಹಕಾರ ನೀಡಬೇಕು. ರೋಗ ಬರುವ ಮುನ್ನ ಬರದಂತೆ ಎಚ್ಚರ ವಹಿಸುವುದು ಸೂಕ್ತ. ಅದಕ್ಕಾಗಿ ತಾಲೂಕಿನ ಜನತೆ ಇನ್ನಾದರೂ ತಮ್ಮ ಮತ್ತು ಕುಟುಂಬ ಸದಸ್ಯರ ಆರೋಗ್ಯಕ್ಕಾಗಿ ತಾಲೂಕಾಡಳಿತದ ಕ್ರಮಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿಕೊಂಡರು. ಲಾಕ್‌ಡೌನ್ ಯಶಸ್ವಿಗೊಳಿಸಲು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಲಾಕ್‌ಡೌನ್ ವಿಫಲವಾದರೆ ಸಂಬಂಧಿತ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದರು.

ಸಭೆಯಲ್ಲಿದ್ದ ಜನಪ್ರತಿನಿಧಿಗಳು, ಪುರಸಭೆ ಸದಸ್ಯರು ಹಾಗೂ ಗಣ್ಯರು ಶಾಸಕರ ತೀರ್ಮಾನಕ್ಕೆ ಸಹಮತ ವ್ಯಕ್ತಪಡಿಸಿದರು. ಕರೊನಾ ರೋಗ ನಿಯಂತ್ರಣಾ ನೋಡಲ್ ಅಧಿಕಾರಿ ರವೀಂದ್ರ ಹಕಾಟಿ, ತಹಸೀಲ್ದಾರ್ ಅಶೋಕ ಗುರಾಣಿ, ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ, ಇತರ ಅಧಿಕಾರಿಗಳು, ವರ್ತಕರು, ಜನಪ್ರತಿನಿಧಿಗಳಿದ್ದರು. ಶ್ರೀಶೈಲ ಹಿರೇಮಠ ಸ್ವಾಗತಿಸಿ, ನಿರೂಪಿಸಿದರು.

ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಒಂದು ವಾರ ತಾಲೂಕಿನಲ್ಲಿ ಪಿಕೆಪಿಎಸ್, ಬ್ಯಾಂಕ್ ವಹಿವಾಟು, ರಸಗೊಬ್ಬರ, ಬೀಜ ಖರೀದಿ, ಮಾರಾಟ ಸೇರಿದಂತೆ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ. ಹಾಲು, ದಿನಪತ್ರಿಕೆ, ಔಷಧ ಹಾಗೂ ಆಸ್ಪತ್ರೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿಯಿದೆ. ಶುಕ್ರವಾರ, ಶನಿವಾರ ಎರಡು ದಿನ ಜೀವನಾವಶ್ಯಕ ಪದಾರ್ಥ ಖರೀದಿಸಲು ಅವಕಾಶವಿದೆ.| ಉಮೇಶ ಕತ್ತಿ ಶಾಸಕರು ಹುಕ್ಕೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net