

ತಿ.ನರಸೀಪುರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಶಾಲೆಗಳ ವಿಭಾಗದಲ್ಲಿ ಹಾಲಿ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ ತಂಡ ಜಯ ಗಳಿಸಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಚ್.ಡಿ.ಮಾದಪ್ಪ ನೇತೃತ್ವದ ತಂಡ ಸೋಲನುಭವಿಸಿದೆ.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ದಿನವಿಡೀ ನಡೆದ ಚುನಾವಣೆಯಲ್ಲಿ ಸರ್ಕಾರಿ ನೌಕರರ ಸಂಘದ ಹಾಲಿ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ ತಂಡದಿಂದ ಸ್ಪರ್ಧಿಸಿದ್ದ ಐವರು ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಶೀಲರಾಗಿ ಗೆಲುವಿನ ನಗೆ ಬೀರಿದ್ದಾರೆ. ಪ್ರತಿಸ್ಪರ್ಧಿ ಎಚ್.ಡಿ.ಮಾದಪ್ಪ ತಂಡದವರು ಒಂದೂ ಸ್ಥಾನ ಗೆಲ್ಲದೆ ಸೋಲುಂಡಿದೆ.
ಸರ್ಕಾರಿ ಪ್ರಾಥಮಿಕ ಶಾಲೆಗಳ ವಿಭಾಗಕ್ಕೆ ನಿರ್ದೇಶಕರ ಸ್ಥಾನಕ್ಕೆ ಸ್ಪರ್ದಿಸಿದ್ದ ಎ.ಗಜೇಂದ್ರ (495), ಎಸ್.ನಾಗೇಶ್ (422), ಎನ್.ರೇವಣ್ಣ(512), ಜಿ.ಸಿದ್ದಮಲ್ಲಪ್ಪ(450) ಹಾಗೂ ಎಂ.ವಿ.ಶಿವಶಂಕರ ಮೂರ್ತಿ (519) ಮತಗಳನ್ನು ಪಡೆದು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಎಚ್.ಡಿ.ಮಾದಪ್ಪ ತಂಡದ ಸಿ.ವಿ.ಡೈಸಿ (212), ಕುಪ್ಯ ಪುಟ್ಟಸ್ವಾಮಿ (180), ಸಿ.ಬಸವರಾಜು (178), ಟಿ.ಎಸ್.ಸುಬ್ಬಣ್ಣ(190) ಹಾಗೂ ಎಸ್.ಸೋಮಶೇಖರ್(228) ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ.
ಸರ್ಕಾರಿ ನೌಕರರ ಸಂಘದ ಒಟ್ಟು 34 ನಿರ್ದೇಶಕ ಸ್ಥಾನಗಳ ಪೈಕಿ ಸೋಮವಾರ 22 ಸ್ಥಾನಗಳಿಗೆ ಚುನಾವಣೆ ನಡೆಯಿತು. 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. 49 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. 1750 ನೌಕರ ಮತದಾರರು 11 ಮತ ಕ್ಷೇತ್ರಗಳಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಚುನಾವಣಾಧಿಕಾರಿಗಳಾಗಿ ಎ.ಸಿದ್ದರಾಜಪ್ಪ ಹಾಗೂ ಜಿ.ಸುರೇಶ್‌ಕುಮಾರ್ ಕರ್ತವ್ಯ ನಿರ್ವಹಿಸಿದರು.
ಉಳಿದಂತೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ನಡೆದ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ಎಂ.ಶಿವಸ್ವಾಮಿ, ಕಂದಾಯ ಇಲಾಖೆಯಿಂದ ಎರಡು ಸ್ಥಾನಕ್ಕೆ ರುದ್ರೇಶ್ ಹಾಗೂ ಎಂ.ಎಸ್.ಆನಂದ್, ಲೋಕೋಪಯೋಗಿ ಇಲಾಖೆಯ ಒಂದು ಸ್ಥಾನಕ್ಕೆ ಸಿ.ಮಂಜುನಾಥ್, ಜಲಸಂಪನ್ಮೂಲ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಒಂದು ಸ್ಥಾನಕ್ಕೆ ಎಚ್.ಸಿ.ಕೆಂಡಗಣ್ಣಸ್ವಾಮಿ, ಸರ್ಕಾರಿ ಪ್ರೌಢಶಾಲೆ ವಿಭಾಗದಿಂದ ಬಿ.ಪುಟ್ಟರಾಜು, ಸರ್ಕಾರಿ ಪದವಿಪೂರ್ವ ಕಾಲೇಜುಗಳು ಮತ್ತು ಪದವಿ ಕಾಲೇಜು ವಿಭಾಗದಿಂದ ಕೆ.ನಂದೀಶ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆಯಿಂದ ಮಹೇಶ್, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಇಲಾಖೆಯಿಂದ ಎಂ.ಈಶ್ವರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಉಳಿದ ಸಿಬ್ಬಂದಿ)ಯಿಂದ ಎಂ.ನಾಗು ಮತ್ತು ಎನ್.ಸರಸ್ವತಿ, ತೋಟಗಾರಿಕೆ ಇಲಾಖೆಯಿಂದ ಪುಟ್ಟಸ್ವಾಮಿ, ರೇಷ್ಮೆ ಇಲಾಖೆಯಿಂದ ಈಶ್ವರ ಹಾಗೂ ನ್ಯಾಯಾಂಗ ಇಲಾಖೆಯಿಂದ ಎಂ.ಬಸವನಾಯಕ ಆಯ್ಕೆಯಾದರು.
ನಿರ್ದೇಶಕರ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಎಣಿಕೆ ಕೇಂದ್ರದ ಮುಂದೆ ಜಮಾಯಿಸಿದ್ದ ಬೆಂಬಲಿಗರು ಆಯ್ಕೆಯಾದ ನಿರ್ದೇಶಕರನ್ನು ಅಭಿನಂದಿಸಿದರು. ಟಿಒಟಿ ನಾಗರಾಜು, ಸುಬ್ರಹ್ಮಣ್ಯ, ಮಹದೇವಸ್ವಾಮಿ, ಮೂಗೂರು ನಾಗರಾಜು, ಉತ್ತಂಬಳ್ಳಿ ನಾಗರಾಜು, ಆಲಗೂಡು ಮಹದೇವಸ್ವಾಮಿ, ನಾಗೇಂದ್ರ, ಪ್ರಸನ್ನ, ವಿಜಾಪುರ ಲಿಂಗರಾಜು, ಸಿದ್ದರಾಜು, ಮಹದೇವ್‌ಮೂರ್ತಿ, ರಮೇಶ್, ಬಿ.ಆರ್. ಪಿ.ಪ್ರಸನ್ನ, ಕುಮಾರ್ ಹಾಗೂ ಶಿಕ್ಷಕ ವೃಂದದವರು ಇದ್ದರು.