

ಮೈಸೂರು: ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ಸದ್ದಡಗಿಸಿದ ಭಾರತೀಯ ಯೋಧರಿಗೆ ಬೆಂಬಲ ಸೂಚಿಸುವ ಸಲುವಾಗಿ ದೇಶಾದ್ಯಂತ ‘ರಾಷ್ಟ್ರ ರಕ್ಷಣೆಗಾಗಿ ನಾಗರಿಕರು’ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ತಿರಂಗಾ ಯಾತ್ರೆಯು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶುಕ್ರವಾರ ಯಶಸ್ವಿಯಾಗಿ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಜನರು ನಾವು ಭಾರತೀಯ ಸೇನೆಯೊಂದಿಗೆ ಇರುತ್ತೇವೆ ಎಂಬ ಒಕ್ಕೊರಲಿನ ಸಂದೇಶ ನೀಡಿದರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಿಂದ ಆರಂಭಗೊಂಡ ತಿರಂಗಾ ಯಾತ್ರೆಯು ನಂಜರಾಜ ಬಹದ್ದೂರ್ ಛತ್ರ, ರಾಜಕಮಾಲ್ ಟಾಕೀಸ್, ಶಿವರಾಂಪೇಟೆ, ಚಿಕ್ಕಗಡಿಯಾರ ವೃತ್ತ, ಕೆ.ಆರ್.ವೃತ್ತ, ಡಿ.ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ ಮೂಲಕ ಸಾಗಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಲ್ಲಿ ಅಂತ್ಯಗೊಂಡಿತು. ಮಾರ್ಗದ ಉದ್ದಕ್ಕೂ ದೇಶದ ಪರವಾದ ಘೋಷಣೆಗಳು ಮೊಳುಗಿತು. ಮೆರವಣಿಗೆಯಲ್ಲಿ ವಿವಿಧ ಧಾರ್ಮಿಕ ಗುರುಗಳು, ನಾಗರಿಕರು, ನಿವೃತ್ತ ಯೋಧರು, ನಿವೃತ್ತ ಸೇನಾಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರಗಳು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕಾರ್ಯಪ್ಪ ಅವರ ಪ್ರತಿಮೆಗೆ ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಮೌಲನಾ ಉಸ್ಮಾನ್ ಷರೀಫ್, ಕ್ರೈಸ್ತ ಧರ್ಮಗುರುಗಳು ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪುಷ್ಪನಮನ ಸಲ್ಲಿಸಿದರು.
ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ, ದಾಳಿಗಿಳಿದಿದೆ ಭಾರತೀಯ ಸೇನೆ-ತೊಲಗಲಿ ಭಯೋತ್ಪಾದನೆ, ಭಾರತೀಯ ಸೇನೆ ನಮ್ಮ ಹೆಮ್ಮೆ, ಆಪರೇಷನ್ ಸಿಂಧೂರ-ವೀರ ಸೈನಿಕರಿಗೆ ಸೆಲ್ಯೂಟ್, ವಂದೇ ಮಾತರಂ, ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ವೀರ ಯೋಧರಿಗೆ ಸಲಾಂ ಮುಂತಾದ ಫಲಕಗಳನ್ನು ಹಿಡಿದು ಘೋಷಣೆ ಮೊಳಗಿಸಿದರು.
ರಾಷ್ಟ್ರಧ್ವಜಗಳನ್ನು ಹಿಡಿದುಕೊಂಡಿದ್ದ ನಾಗರಿಕರು ದಾರಿಯುದ್ದಕ್ಕೂ ಘೋಷಣೆ ಕೂಗಿದರೆ, ನಿವೃತ್ತ ಯೋಧರು ತಮ್ಮ ಕುಟುಂಬ ಸಮೇತ ಪಾಲ್ಗೊಂಡು ಗಮನ ಸೆಳೆದರು. ಒಂದು ಸಾವಿರ ಮೀಟರ್ ಉದ್ದದ ದೇಶದ ಧ್ವಜವನ್ನು ವಿದ್ಯಾರ್ಥಿಗಳು ಹಿಡಿದು ಸಾಗಿದರು.ನಗರದ ಜೆಎಸ್‌ಎಸ್ ನರ್ಸಿಂಗ್ ಕಾಲೇಜು, ಜೆಎಸ್‌ಎಸ್ ಪದವಿ ಕಾಲೇಜು, ಮಹಾರಾಣಿ ಕಾಲೇಜು, ಮಹಾರಾಜ ಕಾಲೇಜು, ಬಿಜಿಎಸ್ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಗಣಪತಿ ಶ್ರೀಗಳಿಗೆ ಸುತ್ತೂರುಶ್ರೀ ಸಾಥ್: ಕಾಲು ನೋವಿನಿಂದ ನಡೆಯಲು ಸಾಧ್ಯವಾಗದೆ ಇದ್ದ ಹಿನ್ನೆಲೆಯಲ್ಲಿ ಸುತ್ತೂರುಶ್ರೀ ಗಳೊಂದಿಗೆ ಸೇರಿ ಒಂದಿಷ್ಟುದೂರ ನಡೆಯಲು ಬಂದಿದ್ದ ಗಣಪತಿ ಸಚ್ಚಿದಾನಂದಶ್ರೀಗಳು ಜನರ ಜನರ ಉತ್ಸಾಹವನ್ನು ನೋಡಿ ಪೂರ್ಣವಾಗಿ ನಡೆದರು. ಸುತ್ತೂರುಶ್ರೀಗಳು ಎಂದಿನಂತೆ ಯಾತ್ರೆಯಲ್ಲಿ ಮುಂದಡಿ ಇಡುತ್ತಿದ್ದಂತೆ ಗಣಪತಿ ಸಚ್ಚಿದಾನಂದ ಶ್ರೀಗಳು ತಮ್ಮ ಕಾಲು ನೋವು ಮರೆತು ನಡೆಯುವ ಮೂಲಕ ಇತರರನ್ನು ಹುರಿದುಂಬಿಸಿದರು. ಅಲ್ಲಲ್ಲಿ ಶ್ರೀಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಸಂದರ್ಭ ಮಾಜಿ ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೆಗೌಡ, ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ನಗರಾಧ್ಯಕ್ಷ ಎಲ್.ನಾಗೇಂದ್ರ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡಾ.ಅನಿಲ್ ಥಾಮಸ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ.ಮಂಜುನಾಥ್, ಮಿರ್ಲೆ ಶ್ರೀನಿವಾಸ ಗೌಡ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಕುಮಾರ್, ಮಾಜಿ ಮೇಯರ್‌ಗಳಾದ ಎಸ್.ಸಂದೇಶ್ ಸ್ವಾಮಿ, ಶಿವಕುಮಾರ್, ಸುನಂದಾ ಪಾಲನೇತ್ರ ಹಾಗೂ ಇತರರು ಪಾಲ್ಗೊಂಡಿದ್ದರು.