

ಮುಂಡರಗಿ: ಭಾರತೀಯ ಸೈನಿಕರ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಾಜಿ ಸೈನಿಕರು, ದೇಶ ಭಕ್ತರು ಸೇರಿ ಮಂಗಳವಾರ ಬೃಹತ್ ತಿರಂಗಾ ಯಾತ್ರೆ ನಡೆಸಿದರು.
ಕೋಟೆ ಭಾಗದ ಶ್ರೀ ಆಂಜನೇಯ ದೇವಸ್ಥಾನದಿಂದ ಹೊರಟ ತಿರಂಗಾ ಯಾತ್ರೆ ಜಾಗೃತ ಸರ್ಕಲ್, ಗಾಂಧಿ ವೃತ್ತ, ಬಸ್ ನಿಲ್ದಾಣ, ಕನಕದಾಸ ವೃತ್ತ, ಹೇಮರಡ್ಡಿ ಮಲ್ಲಮ್ಮ ವೃತ್ತ, ನುಲಿಯ ಚಂದಯ್ಯ ವೃತ್ತ, ಕೊಪ್ಪಳ ಸರ್ಕಲ್, ಕಿತ್ತೂರು ಚನ್ನಮ್ಮ ವೃತ್ತದ ಮಾರ್ಗವಾಗಿ ತಹಸೀಲ್ದಾರ್ ಕಚೇರಿ ತಲುಪಿತು. 100 ಮೀಟರ್ ಉದ್ಧದ ರಾಷ್ಟ್ರಧ್ವಜ ಹಿಡಿದು ದೇಶದ ಸೈನಿಕರಿಗೆ ಜಯಘೋಷಗಳನ್ನು ಕೂಗಿ ದೇಶಪ್ರೇಮ ಮೆರೆದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ಮತ್ತು ಉಗ್ರರಿಗೆ ತಕ್ಕ ಪಾಠ ಕಲಿಸುವ ಕೆಲಸವನ್ನು ಭಾರತೀಯ ಸೇನೆ ಮಾಡಿದೆ. ಉಗ್ರರನ್ನು ಹುಡುಕಿ ಒಡೆಯುವ ಕೆಲಸ ಮಾಡಿದೆ. ತಿರಂಗಾ ಯಾತ್ರೆಯ ಮೂಲಕ ಸೈನಿಕರಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಲಾಗಿದೆ ಎಂದರು.
ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಮಾಜಿ ಸೈನಿಕರ ಸಂಘದ ಗದಗ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ಆರ್.ಐ. ಸೂರಣಗಿ, ಎನ್.ಆರ್. ದೇವಾಂಗಮಠ, ಕೊಟ್ರೇಶ ಅಂಗಡಿ ಮಾತನಾಡಿದರು.