

ಮಂಡ್ಯ: ತಾಲೂಕಿನ ವಿ.ಸಿ ಫಾರ್ಮ್‌ನಲ್ಲಿ ಆಯೋಜಿಸಿದ್ದ ಕೃಷಿ ಮೇಳದ ಅಂತಿಮ ದಿನವಾದ ಬುಧವಾರ ಜನಸಾಗರ ಹರಿದುಬಂತು. ಮಂಡ್ಯ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ರೈತರು ಹಾಗೂ ರೈತ ಮಹಿಳೆಯರು ದಾಂಗುಡಿ ಇಟ್ಟು, ಕೃಷಿ ಪ್ರಪಂಚವನ್ನು ಕಣ್ತುಂಬಿಕೊಂಡರು.
ಎರಡು ದಿನದ ಕೃಷಿ ಮೇಳಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿತು. ಮೊದಲ ದಿನ 12 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದರು. ಆದರೆ ಎರಡನೇ ದಿನ ಎಲ್ಲೆಲ್ಲೂ ಜನಸಾಗರವೇ ಕಾಣಿಸಿತು. ಅಂದಾಜು 20 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಮೇಳಕ್ಕೆ ಬಂದಿದ್ದರು. ಇದರಿಂದಾಗಿ ಮೇಳ ಇನ್ನಷ್ಟು ಕಳೆಕಟ್ಟಿತು.
ಮೇಳದಲ್ಲಿ ಸುಧಾರಿತ ತಳಿಗಳು ಹಾಗೂ ಹೈಬ್ರಿಡ್‌ಗಳ ಪ್ರಾತ್ಯಕ್ಷಿಕೆ, ವಿವಿಧ ಬೇಸಾಯ ಪದ್ಧತಿ ತಾಕುಗಳು, ರೋಗ ಹಾಗೂ ಕೀಟ ನಿಯಂತ್ರಣ ಪ್ರಾತ್ಯಕ್ಷಿಕೆ ತಾಕುಗಳು, ಡ್ರಂ ಸೀಡರ್‌ನಿಂದ ಹಾಗೂ ಯಂತ್ರಚಾಲಿತ ನಾಟಿ ಪ್ರಾತ್ಯಕ್ಷಿಕೆ, ಹೈಬ್ರಿಡ್ ಭತ್ತದ ಬೀಜೋತ್ಪಾದನಾ ತಾಕುಗಳು. ನೂತನ ರಾಗಿ ತಳಿಗಳ ಪ್ರಾತ್ಯಕ್ಷಿಕೆ, ಸುಧಾರಿತ ಸಿರಿಧಾನ್ಯ ತಳಿಗಳ ಪ್ರಾತ್ಯಕ್ಷಿಕೆ ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ವಿವಿಧ ಸುಧಾರಿತ ಸಿರಿಧಾನ್ಯ ತಳಿಗಳು, ಆರೋಗ್ಯದಾಯಕ ಹೊಸ ಬೆಳೆಗಳಾದ ಅಡಲೆ ರಾಗಿ ಮತ್ತು ಬಂಬಾರ ನೆಲಗಡಲೆ, ಜೋಳದ ತಳಿಯ ತಾಕು, ಮುಸುಕಿನ ಜೋಳದಲ್ಲಿ ಹೈಬ್ರಿಡ್ ತಳಿಗಳ ಪ್ರಾತ್ಯಕ್ಷಿಕೆ, ಮುಸುಕಿನ ಜೋಳದ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಗಮನಸೆಳೆಯಿತು.
ಅಂತೆಯೇ ಸುಧಾರಿತ ಕಬ್ಬಿನ ತಳಿಗಳು, ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆಯ ಪ್ರಾತ್ಯಕ್ಷಿಕೆ, ಕಬ್ಬು ನಾಟಿ ಹಾಗೂ ತರಗು ಪುಡಿ ಮಾಡುವ ಯಂತ್ರಗಳ ಪ್ರಾತ್ಯಕ್ಷಿಕೆ, ಅಂಗಾಂಶ ಕೃಷಿ ತಂತ್ರಜ್ಞಾನದಲ್ಲಿ ಕಬ್ಬಿನ ಸಸಿಗಳ ಉತ್ಪಾದನೆ, ಒಂಟಿ ಕಣ್ಣಿನ ಬಿತ್ತನೆ ನರ್ಸರಿ, ವಿವಿಧ ಹತ್ತಿ ತಳಿಗಳ ಪ್ರಾತ್ಯಕ್ಷಿಕೆ, ಸುಧಾರಿತ ಮೇವಿನ ಬೆಳೆಗಳ ತಾಕು, ರಸಮೇವು ಮತ್ತು ಅಜೋಲ ಉತ್ಪಾದನೆ, ಜಲ ಕೃಷಿಯಲ್ಲಿ(ಹೈಡೋಫೋನಿಕ್ಸ್) ಮೇವಿನ ಉತ್ಪಾದನೆ, ದ್ವಿದಳ ಧಾನ್ಯ ಹಾಗೂ ಎಣ್ಣೆ ಕಾಳು ಬೆಳೆಗಳಾದ ಉದ್ದು, ಅವರೆ, ಸೋಯಾ ಅವರೆ, ಹೆಸರು ಮತ್ತು ಅಲಸಂದೆ ಬೆಳೆಗಳ ಪ್ರಾತ್ಯಕ್ಷಿಕೆ, ಸೂರ್ಯಕಾಂತಿ, ಹರಳು, ಹುಚ್ಚೆಳ್ಳು ಹಾಗೂ ನೆಲಗಡಲೆ ಬೆಳೆಗಳ ಪ್ರಾತ್ಯಕ್ಷಿಕೆ ನಡೆಯಿತು.
ದೂರ ಸಂವೇದಿ ನೀರಾವರಿ ಪದ್ಧತಿ, ವಿವಿಧ ಬೆಳೆಗಳಲ್ಲಿ ನೀರು ಉಳಿತಾಯ ಪದ್ಧತಿ ಪ್ರಾತ್ಯಕ್ಷಿಕೆ, ಸ್ವಯಂ ಚಾಲಿತ ಹನಿ ನೀರಾವರಿ ಪದ್ಧತಿ ಪ್ರಾತ್ಯಕ್ಷಿಕೆ, ಭತ್ತ, ರಾಗಿ ಹಾಗೂ ಇತರೆ ಬೆಳೆಗಳ ಬೀಜೋತ್ಪಾದನಾ ತಾಕುಗಳು, ವಿಶಿಷ್ಟ ಸೊಪ್ಪು ಮತ್ತು ತರಕಾರಿ ಬೆಳೆಗಳ ಪ್ರಾತ್ಯಕ್ಷಿಕೆ, ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ, ಸಮಗ್ರ ಮೀನು ಸಾಕಾಣಿಕೆ ಪದ್ಧತಿಗಳು, ಎರೆ ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆ, ಕೃಷಿ ಮಾಹಿತಿ ಮತ್ತು ಸಲಹಾ ಕೇಂದ್ರ-ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ, ಕೃಷಿ ಪ್ರಕಟಣೆ ಹಾಗೂ ಬಿತ್ತನೆ ಬೀಜಗಳ ಮಾರಾಟ, ಕೃಷಿ ವಸ್ತುಪ್ರದರ್ಶನಗಳು ಮೇಳದಲ್ಲಿ ಆಕರ್ಷಣೆಗಳನ್ನು ಒಳಗೊಂಡಿತ್ತು.
ಇದಲ್ಲದೆ ಕೃಷಿ ವಿಶ್ವವಿದ್ಯಾನಿಲಯದಿಂದ ಬಿಡುಗಡೆ ಮಾಡಲಾಗಿರುವ ಮುಸುಕಿನ ಜೋಳದ ಅಭಿವೃದ್ಧಿ ತಳಿ, ಅಲಸಂದೆ ಕೆಬಿಸಿ-12, ಎಣ್ಣೆ ಕಾಳು ಸೂರ್ಯಕಾಂತಿ ಕೆವಿಎಸ್‌ಎಚ್-90 ಮತ್ತು ದೀರ್ಘವಾದ ಹಾಗೂ ಹೆಚ್ಚು ಬೆಳೆ ಕೊಡುವ ಪಿಎಲ್ಬಿ-342 ಮೇವಿನ ಬೆಳೆಯಾದ ನಾಲ್ಕು ಪ್ರಮುಖ ತಳಿ ಅನಾವರಣಗೊಳಿಸಲಾಯಿತು. ಅಂತೆಯೇ ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗೆ ಶಿಫಾರಸು ಮಾಡಲಾಗಿರುವ ಭತ್ತ, ರಾಗಿ ಮತ್ತು ಸಿರಿಧಾನ್ಯ, ಮುಸುಕಿನ ಜೋಳದಲ್ಲಿ ಹೈಬ್ರಿಡ್ ತಳಿ, ಅತ್ಯುತ್ತಮ ಇಳುವರಿ ಕೊಡುವ ಹಾಗೂ ಹೆಚ್ಚು ಸಕ್ಕರೆ ಅಂಶವಿರುವ ಕಬ್ಬಿನ ತಳಿಯಾದ ಬಾಹುಬಲಿ-517, ಮೇವಿನ ಬೆಳೆ, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು, ನೀರಾವರಿ ಪದ್ಧತಿ ಹಾಗೂ ಇನ್ನಿತರೆ ರೈತರಿಗೆ ಬೇಕಾದ ಮುಖ್ಯ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.
ಬಾಬ್ಸ್ ತಿಯರ್ ಪರಿಚಯ: ಜನರ ಆರೋಗ್ಯದ ದೃಷ್ಟಿಯಿಂದ ಉಪಯೋಗವಾಗುವಂತಹ ಬಂಬಾರ ಮತ್ತು ಹಡಲೆ ರಾಗಿ(ಬಾಬ್ಸ್ ತಿಯರ್) ಎಂಬ 2 ಬೆಳೆಗಳನ್ನು ಹೊಸದಾಗಿ ಪರಿಚಯ ಮಾಡುವುದರ ಜತೆಗೆ ಬೆಳೆಸುವ ವಿಧಾನವನ್ನು ತಿಳಿಸಲಾಯಿತು. ಹಡಲೆ ರಾಗಿಯಲ್ಲಿ ಅಧಿಕ ಪ್ರೋಟೀನ್ ಅಂಶ ಇದ್ದು, ಮೇಘಾಲಯ, ಮಿಜೋರಾಮ್, ಸಿಕ್ಕಿಂನಲ್ಲಿ ಬೆಳೆ ಬೆಳೆದು ಗಂಜಿ ರೂಪದಲ್ಲಿ ಬಳಸಲಾಗುತ್ತದೆ. ಹಡಲೆ ರಾಗಿಯು ಮಾನವನ ಮೂಳೆಯ ಸಾಂದ್ರತೆ ಕಾಪಾಡಲು, ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ಹಾಸ್ಟಿಯೋ ಪ್ಲೋರೋಸಿಸ್ ರೋಗವನ್ನು ಹೋಗಲಾಡಿಸಲು ಬಹಳ ಉಪಯುಕ್ತವಾಗಿದೆ. ಇನ್ನು ಬಂಬಾರ ನೆಲೆಗಡಲೆಯು ಅಲಸಂದೆ ಬೆಳೆಯ ಜಾತಿಗೆ ಸೇರಿದ್ದಾಗಿದ್ದು, ನೆಲಗಡಲೆಯ ರೀತಿ ನೆಲದಲ್ಲಿ ಬಿಡುತ್ತದೆ. ಪೊಟ್ಯಾಶಿಯಂ ಅಂಶ ಹೆಚ್ಚಿರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ಬಹಳ ಉಪಯುಕ್ತವಾಗುತ್ತದೆ.
ಎಂಟು ಲಕ್ಷ ರೂ ಮೌಲ್ಯದ ಹಳ್ಳಿಕಾರ್
ಮೇಳದ ಮತ್ತೊಂದು ಆಕರ್ಷಣೆ ಹಳ್ಳಿಕಾರ್ ತಳಿ ರಾಸುಗಳು. ಕನಕಪುರದಿಂದ ಕರೆಸಲಾಗಿದ್ದ ಎಂಟು ಲಕ್ಷ ರೂ ಮೌಲ್ಯದ ಹಳ್ಳಿಕಾರ್, ಕಾರಸವಾಡಿಯಿಂದ ಬಂದಿದ್ದ ನಾಲ್ಕು ಲಕ್ಷ ರೂ ಮೌಲ್ಯದ ಹಳ್ಳಿಕಾರ್, ಕನ್ನಹಟ್ಟಿ ಗ್ರಾಮದ ಮಲ್ಲಿಕಾರ್ಜುನ್ ಕರೆತಂದಿದ್ದ ಬರೋಬರಿ 68 ಕೆ.ಜಿ ತೂಕದ ಜಮಾರಾ ಮೇಕೆ, ಮೊಳ್ಳೇನಹಳ್ಳಿಯ ಬಂಡೂರು ತಳಿ ಕುರಿಗಳು ಗಮನಸೆಳೆದವು. ಜನರು ಇವುಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.
ಇನ್ನು ಎರಡನೇ ದಿನ ಜನಸಂದಣಿ ಹೆಚ್ಚಿದ ಕಾರಣ ಊಟಕ್ಕೆ ಡಿಮಾಂಡ್ ಹೆಚ್ಚಾಗಿತ್ತು. ಆದಾಗ್ಯೂ ಎಲ್ಲಿಯೂ ಗೊಂದಲವಾಗದಂತೆ ನೋಡಿಕೊಳ್ಳಲಾಯಿತು. ಮುದ್ದೆ, ಮೊಳಕೆಕಾಳಿನ ಗೊಜ್ಜು, ಸಿರಿಧಾನ್ಯದ ಪಾಯಸ ಭೋಜನಪ್ರಿಯರಿಗೆ ಇಷ್ಟವಾಯಿತು.