

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ಹೊರವಲಯ ಹುಣ್ಣಿಗೆರೆಯಲ್ಲಿ ನಿರ್ಮಿಸಿರುವ ಡಾ. ಪುನೀತ್ ರಾಜ್‌ಕುಮಾರ್ ವಸತಿ ಸಂಕೀರ್ಣದಲ್ಲಿ ಶನಿವಾರ ಆಯೋಜಿಸಿದ್ದ ವಿಲ್ಲಾ ಮೇಳದಲ್ಲಿ 70 ಮಂದಿಗೆ ಹಂಚಿಕೆ ಪತ್ರ ವಿತರಿಸಲಾಯಿತು.
ಹುಣ್ಣಿಗೆರೆಯಲ್ಲಿನ ಬಿಡಿಎ ವಿಲ್ಲಾಗಳು ಖಾಸಗಿಯವರು ನಿರ್ಮಿಸಿರುವ ವಸತಿ ಸಮುಚ್ಛಯಗಳಿಗೆ ಸೆಡ್ಡು ಹೊಡೆಯುವಂತಿದೆ. ಸಕಲ ಮೂಲಸೌಕರ್ಯ ಒಳಗೊಂಡಿರುವ ಹಾಗೂ ದೇಸಿ ಶೈಲಿಯಲ್ಲಿ ನಿರ್ಮಿಸಿರುವ ವಿಲ್ಲಾಗಳು ಜನರನ್ನು ಸೆಳೆದಿವೆ. ಇದೇ ಮೊದಲ ಬಾರಿ ಕೋಟಿ ರೂ. ಮೌಲ್ಯದ ವಿಲ್ಲಾಗಳನ್ನು ಜನರು ಖುದ್ದು ವೀಕ್ಷಿಸಿ ಆರಂಭಿಕ ಠೇವಣಿ ನೀಡಿ ಸ್ವಂತ ಸೂರು ತಮ್ಮದಾಗಿಸಿಕೊಂಡು ಖುಷಿಪಟ್ಟರು.
ಡಾ. ಪುನೀತ್ ರಾಜ್‌ಕುಮಾರ್ ವಸತಿ ಸಂಕೀರ್ಣವು 26 ಎಕರೆಯಲ್ಲಿ ನಿರ್ಮಿಸಿದ್ದು, ಒಟ್ಟು 352 ಘಟಕಗಳು ಇವೆ. ಮೂರು ಮಾದರಿಯಲ್ಲಿ ನಿರ್ಮಿಸಿರುವ ವಿಲ್ಲಾಗಳಲ್ಲಿ ಎಲ್ಲ ಬಗೆಯ ನಾಗರಿಕ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮಾರಾಟಕ್ಕೆ 239 ವಿಲ್ಲಾಗಳು ಲಭ್ಯವಿದ್ದು, ಇವುಗಳಲ್ಲಿ 4ಬಿಎಚ್‌ಕೆ ಹಾಗೂ 3ಬಿಎಚ್‌ಕೆ ಸೇರಿವೆ. ವಸತಿ ಸಂಕೀರ್ಣದ ಬದಿಯಲ್ಲೇ 1ಬಿಎಚ್‌ಕೆ ಫ್ಲ್ಯಾಟ್ (320 ಘಟಕಗಳು) ಕೂಡ ಲಭ್ಯವಿದೆ. ಬೆಳಗಿನಿಂದಲೇ ಜನರು ದೊಡ್ಡ ಸಂಖ್ಯೆಯಲ್ಲಿ ವಿಲ್ಲಾ ಸ್ಥಳಕ್ಕೆ ಆಗಮಿಸಿ ತಮಗೆ ಇಷ್ಟವಾದ ಘಟಕಗಳನ್ನು ವೀಕ್ಷಿಸಿದರು. ಸಂಜೆವರೆಗೂ ಸುಮಾರು 400 ಮಂದಿ ಭೇಟಿ ನೀಡಿದ್ದು, ಈ ಪೈಕಿ 130 ಮಂದಿ ಆರಂಭಿಕ ಠೇವಣಿಯನ್ನು ಸ್ಥಳದಲ್ಲಿಯೇ ಪಾವತಿಸಿದರು. ಠೇವಣಿ ಪ್ರಕ್ರಿಯೆ ಪೂರ್ಣಗೊಳಿಸಿದ 70 ಮಂದಿಗೆ ಸ್ಥಳದಲ್ಲೇ ಹಂಚಿಕೆ ಪತ್ರ ವಿತರಿಸಲಾಯಿತು. ಉಳಿದವರಿಗೆ ಶೀಘ್ರವೇ ಹಂಚಿಕೆ ಪತ್ರ ನೀಡಲಾಗುವುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ವಿಲ್ಲಾ ಖರೀದಿಗೆ ಹಣಕಾಸು ನೆರವು ನೀಡುವುದಕ್ಕಾಗಿ ಕೆಲ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಖಾಸಗಿ ಬ್ಯಾಂಕ್‌ಗಳ ಪ್ರತಿನಿಧಿಗಳು ಮಳಿಗೆ ಹಾಕಿದ್ದವು. ಇಲ್ಲಿ ನಾಗರಿಕರು ತಮಗೆ ಬೇಕಾದ ಹಣದ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.
ಮೇಳದಲ್ಲಿ ಬಿಡಿಎ ಆರ್ಥಿಕ ಸದಸ್ಯ ಡಾ. ಎ.ಲೋಕೇಶ, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸಮೂರ್ತಿ, ಅಭಿಯಂತರ ಅಧಿಕಾರಿ ಮಲ್ಲಿಕಾರ್ಜುನಸ್ವಾಮಿ, ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಭಾಗವಹಿಸಿದ್ದರು.