

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹಾಗೂ ನೇಹಾ ಹಿರೇಮಠ ಹತ್ಯೆ ಖಂಡಿಸಿ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.
ವೀರಾಪುರ ಓಣಿಯ ಅಂಜಲಿ ಅಂಬಿಗೇರ ಅವರ ನಿವಾಸದಿಂದ ಹೊರಟ ಪ್ರತಿಭಟನೆಯು ಘಂಟಿಕೇರಿ ಓಣಿ, ಮಂಗಳವಾರ ಪೇಟೆ, ಶಾ ಬಜಾರ್, ದುರ್ಗದ ಬೈಲ್, ಮ್ಯಾದಾರ ಓಣಿ, ದಾಜಿಬಾನ ಪೇಟೆ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ರಾಣಿ ಚನ್ನಮ್ಮ ವೃತ್ತ ತಲುಪಿತು. ಬಳಿಕ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ದಾರ್ಶನಿಕರು ನಡೆದಾಡಿದ ನೆಲದಲ್ಲಿ ಇಂತಹ ಘಟನೆಗಳು ನಡೆದಿವೆ. ಸರ್ಕಾರಗಳು ಇಂತಹ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಪ್ರಕರಣ ನಡೆಯಲು ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಬಡವರು ತೊಂದರೆ ಇದೆ ಎಂದು ಬಂದಾಗ ಪೊಲೀಸರು ನ್ಯಾಯ ಕೊಡಿಸಬೇಕೇ ಹೊರತು ನಿರ್ಲಕ್ಷ್ಯ ಮಾಡಬಾರದು. ಇಂತಹ ಪ್ರಕರಣಗಳಲ್ಲಿ ಎನ್‌ಕೌಂಟರ್ ಕಾನೂನು ಜಾರಿಯಾಗಲಿ. ಕಾನೂನಿನ ಭಯ ಇಲ್ಲದಿರುವುದರಿಂದಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಆರೋಪಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಬಡ ಕುಟುಂಬದವರಿಗೆ ನ್ಯಾಯ ದೊರಕಿಸಿಕೊಡಬೇಕು. ಸರ್ಕಾರದಿಂದ ಸೌಲಭ್ಯಗಳು ದೊರೆಯಬೇಕು. ಅಂಜಲಿ ಕುಟುಂಬಸ್ಥರಿಗೆ ನ್ಯಾಯ ದೊರೆಯುವವರೆಗೂ ಈ ಹೋರಾಟ ನಿರಂತರವಾಗಿರಲಿದೆ ಎಂದರು.
ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಒಂದು ತಿಂಗಳಲ್ಲಿ ಎರಡು ಅಮಾನುಷ ಘಟನೆಗಳು ನಡೆಯುತ್ತವೆ ಎಂದರೆ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಕಾನೂನಿನ ಭಯ ಇಲ್ಲದಿರುವುದು ಇಂತಹ ಘಟನೆಗಳಿಗೆ ಸಾಕ್ಷಿಯಾಗಿದೆ. ನೇಹಾ ಪ್ರಕರಣದಲ್ಲಿ ಎಲ್ಲ ರಾಜಕೀಯ ವ್ಯಕ್ತಿಗಳು ಬಂದರು. ಅಂಜಲಿ ವಿಷಯದಲ್ಲಿ ಯಾರೂ ಬರಲಿಲ್ಲ. ಈ ಮೊದಲೇ ತನಗೆ ಜೀವ ಬೆದರಿಕೆ ಇದು ಎಂದು ಅಂಜಲಿ ಕುಟುಂಬದವರು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು. ಎಲ್ಲವನ್ನೂ ಅಲಕ್ಷ್ಯ ಮಾಡುವುದಾದರೆ ಪೊಲೀಸ್ ಇಲಾಖೆ ಯಾಕೆ ಬೇಕು? ಮಹಿಳೆಯರನ್ನು ರಕ್ಷಿಸಬೇಕು ಎಂಬುದು ಕೇವಲ ವೇದಿಕೆ ಭಾಷಣವಾಗಿದೆಯೇ ಹೊರತು ವಾಸ್ತವವಾಗಿ ಇಲ್ಲ. ಈ ಪ್ರಕರಣಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸಿ ನೇಹಾ ಹಾಗೂ ಅಂಜಲಿ ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ಒಂದೇ ವೇಳೆಗೆ ನೀಡಬೇಕು. ಎರಡು ಕುಟುಂಬಗಳಿಗೆ ನ್ಯಾಯ ದೊರಕಿಸದಿದ್ದರೆ ಸ್ವಾಮೀಜಿಗಳ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದೆ ಎಂದರು.
ಹಂತಕನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಸರ್ಕಾರದಿಂದ ಅಂಜಲಿ ಕುಟುಂಬಸ್ಥರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ
ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ನೀವು ಸಲ್ಲಿಸಿದ ಮನವಿ ಪರಿಶೀಲಿಸಿ ಸರ್ಕಾರಕ್ಕೆ ರವಾನಿಸುವುದಾಗಿ ಹೇಳಿದರು. ಇದೇ ವೇಳೆ ದಾನಿಗಳು ಅಂಜಲಿ ಕುಟುಂಬಸ್ಥರಿಗೆ ಧನ ಸಹಾಯ ಮಾಡಿದರು.
ಶ್ರೀ ಮಹಾಂತೇಶ ಸ್ವಾಮೀಜಿ, ಶ್ರೀ ಮೌನೇಶ್ವರ ಸ್ವಾಮೀಜಿ, ಶ್ರೀ ಜಡಿಸಿದ್ಧೇಶ್ವರ ಸ್ವಾಮೀಜಿ, ಮನೋಜ ಕರ್ಜಗಿ ಇತರರು ಇದ್ದರು.