

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಮುಸ್ಲಿಂ ಸಮಾಜದವರು ನಗರದಲ್ಲಿ ಶುಕ್ರವಾರ 6 ತಾಸು ಬೃಹತ್ ಮೆರವಣಿಗೆ ನಡೆಸಿದರು. ಪೈಗಂಬರ್ರ ಸಂದೇಶಗಳನ್ನು ಘೊಷಣೆ ಕೂಗುತ್ತ ಸಾಗಿದರು.
ನಗರದ ಕೇಶ್ವಾಪುರ, ಗಣೇಶಪೇಟ, ಸಿಬಿಟಿ, ಇಸ್ಲಾಂಪುರದಲ್ಲಿ ಧರ್ಮಗುರುಗಳು ಹಾಗೂ ಮುಖಂಡರು ಮೆರವಣಿಗೆಗೆ ಚಾಲನೆ ನೀಡಿದರು. ಮುಸ್ಲಿಂರು ಹೊಸ ಬಟ್ಟೆ ಹಾಗೂ ಸಾಂಪ್ರದಾಯಿಕ ಟೋಪಿ ಧರಿಸಿದ್ದರು. ಮೆರವಣಿಗೆಯಲ್ಲಿ ನೂರಾರು ಮಕ್ಕಳು ಪಾಲ್ಗೊಂಡಿದ್ದು ಗಮನ ಸೆಳೆಯಿತು.
ಮೆರವಣಿಗೆಯು ಪುಣೆ-ಬೆಂಗಳೂರು ರಸ್ತೆ, ಬಂಕಾಪುರ ಚೌಕ, ಯಲ್ಲಾಪುರ ಓಣಿ, ರಾಧಾಕೃಷ್ಣ ಗಲ್ಲಿ, ದುರ್ಗದ ಬೈಲ್, ಕಾಳಮ್ಮನ ಅಗಸಿ, ಬಮ್ಮಾಪುರ ಚೌಕ, ಪೆಂಡಾರಗಲ್ಲಿ ಮೂಲಕ ಸಾಗಿ ಅಸಾರ ಹೊಂಡದಲ್ಲಿರುವ ದರ್ಗಾ ತಲುಪಿತು. ಅಲ್ಲಿ ಪೆಟ್ಟಿಗೆಯಲ್ಲಿಟ್ಟು ಸಂರಕ್ಷಣೆ ಮಾಡಿರುವ ಮೊಹಮ್ಮದ್ ಪೈಗಂಬರರ ಮುಹ್-ಎ-ಮುಬಾರಕ್ (ಕೇಶ ದರ್ಶನ) ದರ್ಶನ ಪಡೆದರು.
ಧರ್ಮಗುರು ತಾಜುದ್ದೀನ್ ಪೀರಾ ಖಾದ್ರಿ, ಶಾಸಕ ಪ್ರಸಾದ ಅಬ್ಬಯ್ಯ, ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ.ಹಿಂಡಸಗೇರಿ, ಅಬ್ದುಲ್ ವಹಾಬ್ ಮುಲ್ಲಾ, ಆಶ್ರಫ್ ಅಲಿ, ಸಿರಾಜ್ ಅಹ್ಮದ್ ಕುಡಚಿವಾಲೆ, ಬಸೀರ್ ಅಹ್ಮದ್, ನಜೀರ್ ಹೊನ್ಯಾಳ, ದಾದಾಹಯಾತ್ ಖೈರಾತಿ, ನವೀದ್ ಮುಲ್ಲಾ. ಆಸೀಫ್ ಬಳ್ಳಾರಿ, ಅಬ್ಬಾಸ್ ಕುಮಟಾಕರ್, ಆರೀಫ್ ಮುಜಾವರ್, ಮಲ್ಲಿಕಜಾನ್ ಸಿಕಂದರ್, ರಮೇಶ ಮಹಾದೇವಪ್ಪನವರ, ಅನೇಕರು ಭಾಗವಹಿಸಿದ್ದರು.
ಈದ್ ಮಿಲಾದ್ ಪ್ರಯುಕ್ತ ಎಲ್ಲ ಮಸೀದಿ, ದರ್ಗಾಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದ ಸೈಕಲ್, ಬೈಕ್, ಇನ್ನಿತರ ವಾಹನಗಳಿಗೆ ಧ್ವಜ ಕಟ್ಟಿಕೊಂಡು ನಗರದಲ್ಲಿ ವಿವಿಧೆಢೆ ಸಂಚರಿಸಿದರು. ಕೆಲವು ಕಟ್ಟಡಗಳ ಮೇಲೆ ಹಸಿರು ಧ್ವಜ, ಮಾರ್ಗಗಳಲ್ಲಿ ಹಸಿರು ಬಟ್ಟೆಯ ತೋರಣಗಳನ್ನು ಕಟ್ಟಿ ಹಬ್ಬದ ಸಂಭ್ರಮ ಹೆಚ್ಚಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾ ಇಡಲಾಗಿತ್ತು. ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.