

ಮಂಡ್ಯ: ಚಿಕ್ಕಮಂಡ್ಯ ಕೆರೆಯಂಗಳದ ಬೀಡಿ ಕಾರ್ಮಿಕರ ಕಾಲನಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಹೊತ್ತಿದ ಬೆಂಕಿಗೆ ಮನೆಯಲ್ಲಿದ್ದ ವಸ್ತುಗಳೆಲ್ಲ ಭಸ್ಮವಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಮಹಿಳೆ ಹಾಗೂ ನಾಲ್ವರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಕಾಲನಿಯ ಸಲ್ಮಾನ್ ಪಾಷಾ ಮನೆಯಲ್ಲಿ ಅವಘಡ ನಡೆದಿದೆ. ಮೊದಲು ವಿದ್ಯುತ್ ಕಡಿತಗೊಂಡು ಕೆಲವೇ ಹೊತ್ತಿನಲ್ಲಿ ಬಂದಿದೆ. ಈ ಸಮಯದಲ್ಲಿ ಫ್ಯಾನ್ ವೈಯರ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಅಕ್ಕಪಕ್ಕದ ಮನೆಯವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದಾಗ್ಯೂ ಬಟ್ಟೆ, ದವಸ, ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳು ಸುಟ್ಟು ಹೋಗಿವೆ. ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.