

ಚನ್ನರಾಯಪಟ್ಟಣ : ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಹಾದು ಹೋಗಿರುವ 66 ಕೆ ವಿ ವಿದ್ಯುತ್ ಮಾರ್ಗದ ತಂತಿ ಸಡಿಲವಾಗಿ ಆನೆಕೆರೆ ಮಾರ್ಗದ 11 ಕೆವಿ ವಿದ್ಯುತ್ ಮಾರ್ಗದ ತಂತಿಗೆ ತಗುಲಿದ ಪರಿಣಾಮ ಜ್ಞಾನಸಾಗರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯ ವಿದ್ಯುತ್ ಪರಿವರ್ತಕ ಸ್ಫೋಟಗೊಂಡು ಲಕ್ಷಾಂತರ ರೂ. ಮೌಲ್ಯದ ವಿದ್ಯುತ್ ಉಪಕರಣಗಳು ಸುಟ್ಟುಹೋಗಿವೆ.
ಶುಕ್ರವಾರ ಬೆಳಗ್ಗೆ 11.30ರ ಸಮಯದಲ್ಲಿ ತಂತಿಗೆ ತಗುಲಿದ ಪರಿಣಾಮ ಹೈವೋಲ್ಟೇಜ್ ಹರಿದು ಶಾಲೆಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯುತ್ ಲೈನ್ ಹಾಗೂ ಬೆಲೆ ಬಾಳುವ ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಆನೆಕೆರೆ ಮಾಳೆನಹಳ್ಳಿ ನಾಗಸಮುದ್ರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಉಪಕರಣಗಳು ಸಂಪೂರ್ಣ ಹಾನಿಗೀಡಾಗಿದ್ದು, ಅಪಾರ ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೃಷ್ಣ ಭೇಟಿ ನೀಡಿ ಪರಿಶೀಲಿಸಿದರು. ಸೆಸ್ಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿದ್ಯುತ್ ತಂತಿಗಳ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ತಂತಿಗಳು ಸಡಿಲವಾಗಿ ಆಗಾಗ್ಗೆ ಇಂತಹ ಘಟನೆಗಳು ಸಂಭವಿಸುತ್ತವೆ ಎಂದು ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆ ಸಿಇಒ ಡಾ. ಭಾರತಿ ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು.
ತಂತಿಗಳು ಸಡಿಲವಾಗಿ ಬಿದ್ದು, ಲಕ್ಷಾಂತರ ರೂ. ಬೆಲೆಬಾಳುವ ವಿದ್ಯುತ್ ಉಪಕರಣಗಳು ಹಾಳಾಗಿದ್ದರೂ ಸೆಸ್ಕ್ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಯಾವುದಾದರು ಅವಘಡ ಸಂಭವಿಸಿದ ನಂತರ ಸ್ಥಳಕ್ಕೆ ದೌಡಾಯಿಸುವ ಅಧಿಕಾರಿಗಳು ಅವಘಡ ನಡೆಯುವ ಮುನ್ನವೇ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡರೆ ಅವಘಡಗಳನ್ನು ತಡೆಯಬಹುದು ಎಂದು ವಕೀಲ ನಾಗಸಮುದ್ರ ಪಿ.ಮಧುಸೂದನ್ ತಿಳಿಸಿದ್ದಾರೆ.