

ಅರಕಲಗೂಡು: ತಾಲೂಕಿನ ಕೊಣನೂರು ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಫೆ.22ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎ.ಮಂಜು ತಿಳಿಸಿದರು.
ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲಸಕ್ಕೆ ವಯೋಮಿತಿ ನಿಗದಿಪಡಿಸಿಲ್ಲ. ಹೀಗಾಗಿ ವಿದ್ಯಾರ್ಹತೆಗೆ ತಕ್ಕಂತೆ 55 ವರ್ಷದೊಳಿಗಿನ ನಿರುದ್ಯೋಗಿ ಯುವಕ, ಯುವತಿಯರು, ಮಹಿಳೆಯರು, ಪುರುಷರು ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಉದ್ಯೋಗ ಮೇಳ ನಗರ ಪ್ರದೇಶಕ್ಕೆ ಸೀಮಿತವಾಗಿ ನಡೆಯುತ್ತವೆ. ಕಾಲೇಜಿನ ಅಧ್ಯಾಪಕ ವರ್ಗ ಸೇರಿಕೊಂಡು ಗ್ರಾಮೀಣ ಭಾಗದ ಎಲ್ಲಾ ವಯಸ್ಸಿನ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಈ ವಿನೂತನ ಮತ್ತು ಅವಶ್ಯಕವಾಗಿರುವ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಶ್ಲಾಘನೀಯವಾಗಿದೆ ಎಂದರು.
ಉದ್ಯೋಗ ಮೇಳ ಸಂಯೋಜಕ ಸುನೀಲ್ ಮಾತನಾಡಿ, ಬೆಂಗಳೂರಿನ ಅನೇಕ ಪ್ರಖ್ಯಾತ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿವೆ. ಸುಮಾರು 50ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುತ್ತಿವೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಪದವೀಧರರು, ಎಂಬಿಎ, ಬಿಬಿಎಂ, ಡಿಪ್ಲೊಮಾ, ಐಟಿಐ ಇತರ ಶಿಕ್ಷಣ ಮುಗಿಸಿರುವವರು ಉದ್ಯೋಗ ಪಡೆದುಕೊಳ್ಳಬಹುದಾಗಿದೆ. ಮೇಳದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ನಾಲ್ಕು ಪಾಸ್‌ಪೋರ್ಟ್ ಭಾವಚಿತ್ರ, ಮಾರ್ಕ್ಸ್ ಕಾರ್ಡ್, ಜತೆಗೆ ಸ್ವವಿವರ ಇರುವ ಅರ್ಜಿ ತರತಕ್ಕದ್ದು ಎಂದು ಹೇಳಿದರು.
ವಿಶೇಷವಾಗಿ ಮಹಿಳೆಯರಿಗೆ ಹೊಸ ರೀತಿಯಲ್ಲಿ ಅವಕಾಶ ಕೊಡಲು ಉದ್ದೇಶಿಸಲಾಗಿದೆ. 35ವರ್ಷ ಮೀರಿರುವವರಿಗೆ ಹಾಸ್ಪಿಟಾಲಿಟಿ, ಓಲ್ಡೇಜ್‌ನಂತಹ ಕ್ಷೇತ್ರದಲ್ಲಿ ತರಬೇತಿ ನೀಡಿ ಉದ್ಯೋಗ ಕೊಡಲು ಕಂಪನಿಗಳು ಮುಂದೆ ಬಂದಿವೆ. ಅಲ್ಲದೆ ಮುಂದೆಯೂ ಕೂಡ ಕಾಲೇಜಿನಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಪ್ರಾಂಶುಪಾಲ ರಾಜೀವ್ ಮಾತನಾಡಿ, ಕಾಲೇಜಿನಲ್ಲಿ ಕಲಿಯುತ್ತಿರುವ ಹಾಲಿ ವಿದ್ಯಾರ್ಥಿಗಳಲ್ಲದೆ ಹಳೇ ವಿದ್ಯಾರ್ಥಿಗಳಿಗೂ ಉದ್ಯೋಗ ಕಲ್ಪಿಸಲಾಗುವುದು. ಹಾಗಾಗಿ ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಚೌಡೇಗೌಡ, ಸದಸ್ಯ ರಾಜು, ಗ್ರಾಪಂ ಅಧ್ಯಕ್ಷೆ ಮಿಜ್ಭಾ ರಿಜ್ವಾನ್, ಉಪನ್ಯಾಸಕರು ಇದ್ದರು.