ಮಾ.10ರಿಂದ ಬೃಹತ್ ಉದ್ಯೋಗ ಮೇಳ

Job
Published on

ಮೈಸೂರು: ಎಚ್.ವಿ.ರಾಜೀವ್ ಸ್ನೇಹ ಬಳಗದ ವತಿಯಿಂದ ಮಾರ್ಚ್ 10 ಮತ್ತು 11ರಂದು ನಗರದಲ್ಲಿ ವರ್ಚ್ಯುಯಲ್ ಮತ್ತು ಭೌತಿಕ ಮಾದರಿಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಕುವೆಂಪುನಗರದ ಪ್ರಮತಿ ಹಿಲ್ ವ್ಯೆ ಅಕಾಡೆಮಿ ಶಾಲೆಯಲ್ಲಿ ಉದ್ಯೋಗ ಮೇಳ ನಡೆಯಲಿದ್ದು, 50ಕ್ಕೂ ಹೆಚ್ಚು ಪ್ರತಿಷ್ಠಿತ ಸಂಸ್ಥೆಗಳು ಭಾಗವಹಿಸಲಿವೆ. 5000 ಜನರಿಗೆ ಉದ್ಯೋಗ ನೀಡುವ ಅವಕಾಶವಿದೆ. ಹೀಗಾಗಿ ಉದ್ಯೋಗಾಕಾಂಕ್ಷಿಗಳು ಈ ಬೃಹತ್ ಉದ್ಯೋಗ ಮೇಳದ ಸದುಪಯೋಗಪಡಿಸಿಕೊಳ್ಳಬೇಕೆಂದು ಮೇಳದ ಆಯೋಜಕರೂ ಆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಮೇಳದಲ್ಲಿ ಪಾಲ್ಗೊಳ್ಳುವ ಪದವೀಧರರು ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಮಾರ್ಚ್ 4ರಂದು ಬೆಳಗ್ಗೆ 9.30ರಿಂದ ಉದ್ಯೋಗ ಪೂರ್ವ ಸಂದರ್ಶನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದರು.

ಮಾರ್ಚ್ 10 ರಂದು ಬೆಳಗ್ಗೆ 9.30ಕ್ಕೆ ಪ್ರಾರಂಭವಾಗುವ ಉದ್ಯೋಗ ಮೇಳದಲ್ಲಿ 10ನೇ ತರಗತಿ, ದ್ವಿತೀಯ ಪಿಯುಸಿ, ಐಟಿಐ, ಜೆಒಸಿ, ಡಿಪ್ಲೊಮಾ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಅಭ್ಯರ್ಥಿಗಳಿಗೆ ಉದ್ಯೋಗ ಪೂರ್ವ ಸಂದರ್ಶನ ಇರುವುದಿಲ್ಲ ಎಂದು ವಿವರಿಸಿದರು.
ಮಾರ್ಚ್ 11ರಂದು ಬೆಳಗ್ಗೆ 9.30ರಿಂದ ನಡೆಯುವ ಉದ್ಯೋಗ ಮೇಳದಲ್ಲಿ ಉದ್ಯೋಗ ಪೂರ್ವ ಸಂದರ್ಶನದಲ್ಲಿ ಭಾಗವಹಿಸಿದ್ದ ಎಲ್ಲ ಪದವೀಧರರು, ಪಿ.ಜಿ. ಮತ್ತು ಇಂಜಿನಿಯರಿಂಗ್ ಪದವೀಧರ ಅಭ್ಯರ್ಥಿಗಳು ಸಾಮಾನ್ಯ ಜ್ಞಾನ, ಮೌಖಿಕ ಸಾಮರ್ಥ್ಯ ಹಾಗೂ 30 ನಿಮಿಷಗಳ ಕಾಲ ವಿಶ್ಲೇಷಣಾತ್ಮಕ ಕೌಶಲಗಳ ಬಗ್ಗೆ ಉತ್ತರಿಸಬೇಕಾಗುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಹೆಲ್ಪ್‌ಲೈನ್ ಸಂಖ್ಯೆ 9513373737 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಮುಖಂಡರಾದ ಎಸ್.ವಿ.ವೆಂಕಟೇಶ್, ಜಯಂತ್, ರಾಂಪ್ರಸಾದ್ ಹಾಜರಿದ್ದರು.

ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಬಗ್ಗೆ ವಿಪ್ರ ಮುಖಂಡರು ಅಸಮಾಧಾನ ವ್ಯಕ್ತಪಡಿಸಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಆದರೆ ನಾನು ಬಿಜೆಪಿಯಿಂದ ಈ ಕ್ಷೇತ್ರದ ಅಭ್ಯರ್ಥಿಯಾಗುವ ಆಕಾಂಕ್ಷೆ ಹೊಂದಿದ್ದು, ಇದನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ.
ಎಚ್.ವಿ.ರಾಜೀವ್ ಮಾಜಿ ಅಧ್ಯಕ್ಷ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net