ಶಿರಸಿ: ಗ್ರಾಮೀಣ ಭಾಗದ ಉದ್ಯೋಗ ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆ.1 ಮತ್ತು 2ರಂದು ಮೂಡುಬಿದರೆಯಲ್ಲಿ 15ನೇ ಆವೃತ್ತಿಯ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ ಸಂಘಟಿಸಿದೆ ಎಂದು ಆಳ್ವಾಸ್ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರಸಾದ ಶೆಟ್ಟಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿಂಗ್, ಹಣಕಾಸು, ಐಟಿ, ಐಟಿಇಎಸ್, ಹೆಲ್ತ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಹಾಸ್ಟಿಟ್ಯಾಲಿಟಿ, ಟೆಲಿಕಾಂ, ಮಾಧ್ಯಮ, ಶಿಕ್ಷಣ ಕ್ಷೇತ್ರಗಳನ್ನು ಪ್ರತಿನಿಧಿಸುವ ಉನ್ನತ ಕಂಪನಿಗಳು ಉದ್ಯೋಗ ಮೇಳದಲ್ಲಿ ನೇಮಕಾತಿ ಮಾಡಿಕೊಳ್ಳಲಿವೆ. ಈ ಕಂಪನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾಮೆಡಿಕಲ್, ಇಂಜಿನಿಯರಿಂಗ್, ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸಲಿವೆ. ಈ ಎಲ್ಲ ವಲಯಗಳಿಂದ 15,900 ಉದ್ಯೋಗ ದೊರೆಯಲಿದೆ. 2025ರ ಶೈಕ್ಷಣಿಕ ವರ್ಷದ ಮುಂಚೆ ಪೂರ್ಣಗೊಳಿಸುವವರು ಹಾಗೂ ಅನುಭವವಿರುವ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಬಹುದು. ಐಟಿ ವಲಯದಲ್ಲಿ 8 ಕಂಪನಿಗಳು 125 ಉದ್ಯೋಗವಕಾಶ ಕಲ್ಪಿಸಲಿವೆ. ಐಟಿಐಇಎಸ್ ವಲಯದಲ್ಲಿ 24ಕಂಪನಿಗಳು 4000ಕ್ಕೂ ಹೆಚ್ಚು ಉದ್ಯೋಗ ನೀಡಲಿವೆ. ಬಿಇ-ಬಿಟೆಕ್ ಅಭ್ಯರ್ಥಿಗಳಿಗೆ 1000ಕ್ಕೂ ಹೆಚ್ಚು ನಾನ್ ಕೋರ್ ಐಟಿ ಉದ್ಯೋಗ, ಹೆಚ್‌ಆರ್ ಹುದ್ದೆಗೆ 20ಉದ್ಯೋಗಾವಕಾಶ ಇರಲಿದೆ. ಹೊರಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಜುಲೈ 31ರಿಂದಲೇ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು. ಆಳ್ವಾಸ್ ಪ್ರಗತಿ ಸಂಯೋಜಕ ನಿತೀನ್ ಕೆ. ಇದ್ದರು.