ಮರಾಟಿ ಸಂಘದಿಂದ ಬೃಹತ್ ಉದ್ಯೋಗ ಮೇಳ

Mbd_Marati
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಸಮಗ್ರ ಮರಾಟಿಗರ ಬಲವರ್ಧನೆ, ಪ್ರಗತಿಗಾಗಿ ನಡೆಯುತ್ತಿರುವ ಗದ್ದಿಗೆ ಕರಾವಳಿ ಮರಾಟಿ ಸಮಾವೇಶ ಪ್ರಯುಕ್ತ ಮರಾಟಿ ಸಮುದಾಯದ ನಿರುದ್ಯೋಗಿ ಯುವಕ- ಯುವತಿಯರಿಗೆ, ವಿದ್ಯಾರ್ಥಿಗಳಿಗೆ ಒಳ್ಳೆಯ ಉದ್ಯೋಗ ನೀಡುವ ಉದ್ದೇಶದಿಂದ ಕರ್ನಾಟಕ ಮರಾಟಿ ಸಂಘ ಬೆಂಗಳೂರಿನ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಮೂಡುಬಿದಿರೆಯ ಆಳ್ವಾಸ್ ಕಾಲೇಜು ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಯಿತು.

ಉದ್ಯೋಗ ಮೇಳದಲ್ಲಿ ಪ್ರಮುಖ ಕಂಪನಿಗಳಾದ ಟಾಟಾ ಇಲೆಕ್ಟ್ರಾನಿಕ್ಸ್ ಸಿಸ್ಟಮ್ ಸೊಲ್ಯೂಷನ್ಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಮೂತ್ತೂಟ್ ಫಿನಾನ್ಸ್ ಸೇರಿದಂತೆ ಒಟ್ಟು 40 ಕಂಪನಿಗಳು ಪಾಲ್ಗೊಂಡವು. ಒಟ್ಟು 40 ಕಂಪನಿಗಳು 445 ಉದ್ಯೋಗಾಕಾಂಕ್ಷಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿದರೆ, ಅವುಗಳಲ್ಲಿ 11 ಕಂಪನಿಗಳು 213 ಜನರಿಗೆ ಸ್ಥಳದಲ್ಲಿ ನಿಯೋಜನೆಯ ಆದೇಶ(ಆನ್ ದಿ ಸ್ಪಾಟ್ ಪ್ಲೇಸ್‌ಮೆಂಟ್ ಆರ್ಡರ್) ಪತ್ರ ನೀಡಿವೆ. 1,400 ಜನರು ಉದ್ಯೋಗ ಮೇಳಕ್ಕೆ ನೋಂದಣಿ ಮಾಡಿಕೊಂಡಿದ್ದರೆ, 684 ಜನರು ಉದ್ಯೋಗ ಮೇಳದಲ್ಲಿ ಪಾಲ್ಗೊಂಡರು.

ಮರಾಟಿ ಸಮುದಾಯದ 800ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿದರು. ಬೆಂಗಳೂರಿನ ಕರ್ನಾಟಕ ಮರಾಟಿ ಸಂಘದ ಗೌರವ ಕಾರ್ಯದರ್ಶಿ, ವಕೀಲ ಪ್ರವೀಣ್‌ಕುಮಾರ ಮುಗುಳಿ ಪ್ರಾಸ್ತಾವಿಕ ಮಾತನಾಡಿದರು. ಬೆಂಗಳೂರಿನ ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ರಾಮ ನಾಯ್ಕ, ಉದ್ಯಮಿ ಉಮೇಶ ಕುಮಾರ್, ಕೇರಳ ಮಾರಾಟಿ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸುಬ್ರಾಯ ನಾಯ್ಕ ಮುಖ್ಯ ಅತಿಥಿಗಳಾಗಿದ್ದರು.

ಬೆಂಗಳೂರಿನ ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಡಾ.ಕೆ.ಸುಂದರ ನಾಯ್ಕ, ಮಂಗಳೂರಿನ ಅಬಕಾರಿ ಇಲಾಖೆ ಜಂಟಿ ಆಯುಕ್ತ ಡಾ.ಬಾಲಕೃಷ್ಣ ಸಿ.ಎಚ್., ಬಿ.ಇ.ಎಲ್. ಎಡಿಷನಲ್ ಜನರಲ್ ಮ್ಯಾನೇಜರ್ ನರಸಿಂಹ ನಾಯ್ಕ, ಮರಾಟಿ ಸಮುದಾಯದ ಪ್ರಮುಖರಾದ ದುರ್ಗಾ ಪ್ರಸಾದ ಮಜಕಾರ್, ಸದಾಶಿವ ನಾಯ್ಕ, ಡಾ.ಸದಾಶಿವ ನಾಯ್ಕ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರಕಾಶ ನಾಯ್ಕ ನಿರೂಪಿಸಿದರು. ಬೆಂಗಳೂರಿನ ಕರ್ನಾಟಕ ಮಾರಾಟಿ ಸಂಘದ ಅಧ್ಯಕ್ಷೆ ಶೋಭಾವತಿ ಎಂ.ಟಿ. ವಂದಿಸಿದರು.

ಕೌಶಲಭರಿತ ಆಕಾಂಕ್ಷಿಗಳಿಗೆ ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ವಿಪುಲ ಉದ್ಯೋಗಾವಕಾಶ ಲಭ್ಯವಿದೆ. ಕಠಿಣ ಪರಿಶ್ರಮ, ಶ್ರದ್ಧೆಯಿಂದ ಹಂತ ಹಂತವಾಗಿ ಜೀವನದಲ್ಲಿ ಉನ್ನತಿ ಕಾಣಬೇಕು. ಮರಾಟಿ ಸಮುದಾಯದಲ್ಲೂ ಉನ್ನತ ಸ್ಥಾನ ಅಲಂಕರಿಸಿದವರ ಸಂಖ್ಯೆ ಬಹಳ ದೊಡ್ಡದಿದೆ. ಅವರ ಸಾಧನೆಯ ಹಾದಿ, ಮರಾಟಿ ಸಮುದಾಯದ ಯುವ ಜನತೆಗೆ ಪ್ರೇರಣೆಯಾಗಬೇಕು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಈ ಸಮುದಾಯದೊಂದಿಗೆ ಸದಾ ಇರುತ್ತದೆ. ಮುಂದಿನ ದಿನಗಳಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಬೃಹತ್ ಉದ್ಯೋಗ ಮೇಳದಲ್ಲಿ ಈ ಸಮುದಾಯದ ಆಕಾಂಕ್ಷಿಗಳಿಗೆ ಹೆಚ್ಚಿನ ತರಬೇತಿ ನೀಡಿ ಉದ್ಯೋಗ ಪಡೆಯುವಲ್ಲಿ ಸಹಕರಿಸಲಾಗುವುದು.

- ವಿವೇಕ್ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ

ಮರಾಟಿ ಸಮುದಾಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಮೂಲಕ ನಮ್ಮ ಸಮುದಾಯದ ನಿರುದ್ಯೋಗಿ ಯುವಕ- ಯುವತಿಯರಿಗೆ ದೇಶದ ಉನ್ನತ ಕಂಪನಿಯಲ್ಲಿ ಉದ್ಯೋಗ ಪಡೆಯುವ ಅವಕಾಶ ಲಭಿಸಲಿದೆ.

- ಪ್ರವೀಣ್‌ಕುಮಾರ ಮುಗುಳಿ, ಗೌರವ ಕಾರ್ಯದರ್ಶಿ, ಬೆಂಗಳೂರಿನ ಕರ್ನಾಟಕ ಮರಾಟಿ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net