ನಿಡೋಣಿಯಲ್ಲಿ ಬೃಹತ್​ ರೈತ ಸಮಾವೇಶ

Huge farmers' convention in Nidoni
ಸಚಿವ ಎಂ.ಬಿ. ಪಾಟೀಲ
Published on

ವಿಜಯಪುರ : ಬಬಲೇಶ್ವರ ತಾಲೂಕಿನ ನಿಡೋಣಿ ಹಾಗೂ ಕಾಖಂಡಕಿ ಸುತ್ತಲಿನ ಅತಿ ಎತ್ತರದ 26 ಸಾವಿರ ಎಕರೆ ಪ್ರದೇಶಕ್ಕೆ ನೀರೊದಗಿಸುವ 5ಎ ಮತ್ತು 5ಬಿ ಲಿಫ್ಟ್​ ಏತನಿರಾವರಿ ಕಾಮಗಾರಿ ಹಾಗೂ 15ನೇ ವಿತರಣಾ ಕಾಲುವೆ ಕಾಮಗಾರಿಗೆ ಮೇ 7 ರಂದು ಸಂಜೆ 4ಕ್ಕೆ ನಿಡೋಣಿ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಭೂಮಿಪೂಜೆ ನೆರವೇರಿಸಲಿದ್ದಾರೆ.

ನಂತರ ನಿಡೋಣಿ ಚೆನ್ನವಿರೇಶ್ವರ ಪ್ರೌಢಶಾಲೆ ಮೈದಾನದಲ್ಲಿ ಬೃಹತ್​ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ಎಲ್ಲ ಪ್ರಗತಿಪರ ರೈತರು, ವಿವಿಧ ಯೋಜನೆಗಳ ಫಲಾನುಭವಿಗಳು. ರೈತ ಕೃಷಿ ಕಾರ್ಮಿಕರು ಭಾಗವಹಿಸಲಿದ್ದಾರೆ.

ಬಬಲೇಶ್ವರ ತಾಲೂಕು ಕೆರೆ ತುಂಬುವ ಯೋಜನೆ, ಮುಳವಾಡ ಏತನೀರಾವರಿ ಮಲಘಾಣ ಪಶ್ಚಿಮ ಕಾಲುವೆ ಹಾಗೂ ಬಬಲೇಶ್ವರ ಶಾಖಾ ಕಾಲುವೆಯಿಂದ ಈಗಾಗಲೇ ಕೆಲವು ಜಮೀನುಗಳು ನೀರಾವರಿಗೆ ಒಳಪಟ್ಟಿವೆ. ಕಾಖಂಡಕಿ ಮತ್ತು ಶೇಗುಣಶಿ ಹಾಗೂ ನಿಡೋಣಿ, ಹೆಬ್ಬಾಳಟ್ಟಿ, ನಾಗರಾಳ, ಕುಮಠೆ, ಅರ್ಜುಣಗಿ, ಯಕ್ಕುಂಡಿ, ಹೊಕ್ಕುಂಡಿ ಮತ್ತು ತಿಗಣಿಬಿದರಿ ಸುತ್ತಲಿನ ಕೆಲವು ಪ್ರದೇಶಗಳು ಎತ್ತರದ ಕಾರಣ ನೀರಾವರಿಯಿಂದ ವಂಚಿತವಾಗಿದ್ದವು. ಸಚಿವ ಎಂ.ಬಿ. ಪಾಟೀಲರ ಭಗೀರಥ ಪ್ರಯತ್ನದಿಂದ ಈ ಎತ್ತರದ ಪ್ರದೇಶಕ್ಕೆ ನೀರೊದಗಿಸುವುದಕ್ಕಾಗಿ 5ಎ ಮತ್ತು 5ಬಿ ಎಂಬ ಎರಡು ಏತನೀರಾವರಿ ಯೋಜನೆಗಳನ್ನು ವಿನ್ಯಾಸಗೊಳಿಸಿ ಸರ್ಕಾರ ಮಂಜೂರುಗೊಳಿಸಿದೆ. ಅಂದು ಭೂಮಿಪೂಜೆ ಸಲ್ಲಿಸುವುದರ ಮೂಲಕ ಕಾಮಗಾರಿ ಆರಂಭಗೊಳ್ಳಲಿದೆ.

ಸದರಿ ಯೋಜನೆಯಿಂದ ಬಬಲೇಶ್ವರ ಶಾಖಾ ಕಾಲುವೆ ಕಿಮೀ 40 ರಲ್ಲಿ 5ಎ ಲಿಫ್ಟ್​ ಮೂಲಕ 11,300 ಎಕರೆ ಮತ್ತು ಕಿಮೀ 18 ರಲ್ಲಿ 5ಬಿ ಲಿಫ್ಟ್​ ಮೂಲಕ 1,355 ಎಕರೆ ಪ್ರದೇಶಕ್ಕೆ ನೀರೊದಗಿಸುವ ಕಾಮಗಾರಿಗೆ 127 ಕೋಟಿ ಹಾಗೂ ವಿತರಣಾ ಸಂಖ್ಯೆ 15 ಮತ್ತು ಲ್ಯಾಟರಲ್​ ಒಳಗೊಂಡ 13,272 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ 108 ಕೋಟಿ ವೆಚ್ಚದ ಕಾಮಗಾರಿಗಳಿಂದ ಬಬಲೇಶ್ವರ ತಾಲೂಕಿನ ಬಾಕಿ ಉಳಿದ ಒಟ್ಟು 26 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಲಿದೆ.

ಸಮಾವೇಶದಲ್ಲಿ ರೈತರು ತಮ್ಮ ತೋಟದಲ್ಲಿ ಬೆಳೆದಿರುವ ಹಣ್ಣು ಹಂಪಲು ತಂದು ಸಚಿವ ಎಂ.ಬಿ. ಪಾಟೀಲರಿಗೆ ತುಲಾಭಾರ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net