ಸೂರ್ಯಕಾಂತಿ ಇಳುವರಿಯಲ್ಲಿ ಭಾರಿ ಕುಸಿತ

11-GPT-1
Published on


ಚಾಮರಾಜುನಗರ: ಗುಂಡ್ಲುಪೇಟೆ ತಾಲೂಕಿನಲ್ಲಿ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಕೊಳ್ಳಲು ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ನೋಂದಣಿಯಾಗದ ಕಾರಣ ಚಾಮರಾಜನಗರ, ಹನೂರು ಹಾಗೂ ಗುಂಡ್ಲುಪೇಟೆಯ ಎಲ್ಲ ಖರೀದಿ ಕೇಂದ್ರಗಳು ಬಿಕೋ ಎನ್ನುತ್ತಿವೆ.
ತಾಲೂಕು ಸೇರಿದಂತೆ ಜಿಲ್ಲೆಯ ಎಲ್ಲ ಖರೀದಿ ಕೇಂದ್ರಗಳಿಗೂ ಉತ್ಪನ್ನದ ಕೊರತೆಯಾಗುತ್ತಿದೆ. ಹವಾಮಾನ ವೈಪರೀತ್ಯದಿಂದ ಹಾಗೂ ಬಿತ್ತನೆಬೀಜ ಸಮಸ್ಯೆಯಿಂದ ಈ ಬಾರಿ ಸೂರ್ಯಕಾಂತಿ ಬೆಳೆ ನಾಶವಾಗಿದೆ. ಇದನ್ನು ಸರ್ಕಾರ ಅಧ್ಯಯನ ಮಾಡಿ ಸರಿಯಾದ ಕಾರಣ ಕಂಡುಕೊಳ್ಳುವ ಜತೆಗೆ ಬೆಳೆಗಾರರಿಗೆ ಪರಿಹಾರ ಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.


ಎಂಎಸ್.ಪಿ ಯೋಜನೆಯಲ್ಲಿ ಖರೀದಿ: ಸೂರ್ಯಕಾಂತಿ ಬೆಂಬಲ ಬೆಲೆ ಯೋಜನೆಯಲ್ಲಿ ಕ್ವಿಂಟಾಲ್‌ಗೆ 7280 ರೂ. ನಿಗದಿಪಡಿಸಲಾಗಿದೆ. ಈ ದರದಲ್ಲೇ ಖರೀದಿಕೇಂದ್ರ ಖರೀದಿಸಬೇಕಿದೆ. ಸದ್ಯ ಗುಂಡ್ಲುಪೇಟೆ ಪಟ್ಟಣ ಹಾಗೂ ತೆರಕಣಾಂಬಿಯ ಎಪಿಎಂಸಿ ಆವರಣದಲ್ಲಿ ಬೆಳೆಗಾರರಿಂದ ನೋಂದಣಿ ಮಾಡಲಾಗುತ್ತಿದೆ. ಅರ್ಹ ಬೆಳೆಗಾರರು ತಮ್ಮ ಆಧಾರ್ ಕಾರ್ಡ್, ಆರ್‌ಟಿಸಿ, ಎಫ್‌ಐಡಿ, ಆಧಾರ್ ಲಿಂಕ್ ಆಗಿರುವ ನೋಂದಾಯಿತ ಬ್ಯಾಂಕ್ ಪಾಸ್ ಬುಕ್ ಜತೆ ಬಂದು ನೊಂದಾಯಿಸಿಕೊಳ್ಳುತ್ತಿದ್ದಾರೆ. ಸೆ.2 ರಿಂದ 11ರವರೆಗೆ ತಾಲೂಕಿನ ಪಟ್ಟಣ ಹಾಗೂ ತೆರಕಣಾಂಬಿ ಎಪಿಎಂಸಿ ಕೇಂದ್ರಗಳಲ್ಲಿ 830 ಬೆಳೆಗಾರರಿಂದ ಕೇವಲ 7 ಸಾವಿರ ಕ್ವಿಂಟಾಲ್ ಸೂರ್ಯಕಾಂತಿ ಖರೀದಿಗೆ ನೋಂದಣಿಯಾಗಿದೆ.


ಕೃಷಿ ಇಲಾಖೆಯ ಪ್ರಕಾರ ತಾಲೂಕಿನಲ್ಲಿ 35 ಸಾವಿರ ಎಕರೆ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗಿದ್ದು ಪ್ರತಿ ಎಕರೆಗೆ 2 ರಿಂದ 3 ಕ್ವಿಂಟಾಲ್ ಉತ್ಪಾದನೆ ನಿರೀಕ್ಷಿಸಲಾಗಿದೆ. ಈ ಅಂದಾಜಿನ ಪ್ರಕಾರ 1 ಲಕ್ಷ ಕ್ವಿಂಟಾಲ್ ಉತ್ನನ್ನಗಳ ಇಳುವರಿ ಬರಬೇಕಾಗಿದೆ. ಉಳಿದಂತೆ ಸಂತೆಗಳು ಮತ್ತು ಮಾರುಕಟ್ಟೆಯಿಂದ ಹೊರಗೆ 10 ರಿಂದ 12 ಸಾವಿರ ಕ್ವಿಂಟಾಲ್ ಮಾರಾಟವಾಗಿದ್ದರೆ ಖರೀದಿ ಕೇಂದ್ರಗಳಲ್ಲಿ ಕೇವಲ 7 ಸಾವಿರ ಕ್ವಿಂಟಾಲ್ ನೋಂದಣಿಯಾಗಿದೆ.


ವಾಡಿಕೆ ಮಳೆ 288 ಮಿಮೀ ಬೀಳುತ್ತಿತ್ತು. ಈ ಬಾರಿ 326 ಮಿಮೀ ಬೀಳುವ ಮೂಲಕ ಶೇ.26ರಷ್ಟು ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿ ಸುರಿದಿದೆ. ಆದರೂ, ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಬಂದಿಲ್ಲ. ಕೃಷಿ ವಿಜ್ಞಾನಿಗಳು ಇದಕ್ಕೆ ಕಾರಣ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.


ಎಂಎಸ್‌ಪಿ ಯೋಜನೆಯಲ್ಲಿ 1 ಲಕ್ಷ ಕ್ವಿಂಟಾಲ್ ಖರೀದಿಸುವ ಅವಕಾಶವಿದ್ದರೂ ಖರೀದಿ ಕೇಂದ್ರದಲ್ಲಿ 7 ಸಾವಿರ ಕ್ವಿಂಟಾಲ್ ಮಾತ್ರ ನೊಂದಣಿಯಾಗಿದೆ. ಈ ಬಾರಿ ಸೂರ್ಯಕಾಂತಿ ಬೆಳೆ ಕಡಿಮೆಯಾಗಿರುವುದಕ್ಕೆ ಹವಾಮಾನ ವೈಪರೀತ್ಯ ಹಾಗೂ ಕಳಪೆ ಬಿತ್ತನೆ ಬೀಜ ವಿತರಣೆ ಕಾರಣವಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಅಧ್ಯಯನ ನಡೆಸಬೇಕಾಗಿದೆ.
ಎಸ್.ಎಂ.ನಾಗಾರ್ಜುನಕುಮಾರ್, ಪಿಎಚ್‌ಡಿ ಸ್ಕಾಲರ್, ಶಿವಪುರ

ತಾಲೂಕಿನಲ್ಲಿ ಕಳೆದ ವರ್ಷ 14-15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆದಿದ್ದರು. ಈ ಬಾರಿ 11,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಈ ಸಂಬಂಧ ಇಳುವರಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
ಸುಷ್ಮಾ, ಉಪನಿರ್ದೇಶಕಿ ಕೃಷಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net