

ಬ್ಯಾಡಗಿ: ದೇಶದಲ್ಲಿ ಮೆಣಸಿನಕಾಯಿ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದ ಬ್ಯಾಡಗಿ ಮಾರುಕಟ್ಟೆಯಲ್ಲಿ 2024-25ನೇ ಸಾಲಿನಲ್ಲಿ ವಹಿವಾಟು ಇಳಿಮುಖಗೊಂಡಿದ್ದು, ಮಾರುಕಟ್ಟೆ ಶುಲ್ಕ ಸಂಗ್ರಹದಲ್ಲೂ ಭಾರಿ ಕುಸಿತವಾಗಿದೆ.
2022-23ರಲ್ಲಿ ಮಾರುಕಟ್ಟೆ 2287 ಕೋಟಿ ರೂ. ವಹಿವಾಟು ನಡೆಸಿದ್ದು, ಎಪಿಎಂಸಿಗೆ 13.72 ಕೋಟಿ ರೂ. ಶುಲ್ಕ ಸಂಗ್ರಹವಾಗಿತ್ತು. 2023-24ರಲ್ಲಿ 3187 ಕೋಟಿ ರೂ. ವಹಿವಾಟು ನಡೆಸಿ, 19.12 ಕೋಟಿ ರೂ. ಸೆಸ್ ಸಂಗ್ರಹವಾಗಿದೆ. ಹಿಂದಿನ ಎಲ್ಲ ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿ ವಹಿವಾಟು ದಾಖಲೆ ತಲುಪಿತ್ತು. ಆದರೆ, 2024-25ರಲ್ಲಿ ಬರೀ 2067 ಕೋಟಿ ರೂ. ವಹಿವಾಟು ನಡೆಸಿದ್ದು, ಕಳೆದ ವರ್ಷಕ್ಕಿಂತ ಸಾವಿರ ಕೋಟಿ ರೂ. ಇಳಿಕೆಯಾಗಿದೆ.
ಮೆಣಸಿನಕಾಯಿ ಬೆಳೆ ಹೆಚ್ಚಳ: ಕಳೆದ ಹತ್ತು ವರ್ಷಗಳ ಹಿಂದಿಗಿಂತ ಸದ್ಯ ಮಾರುಕಟ್ಟೆಯ ವಹಿವಾಟು ದ್ವಿಗುಣವಾಗಿದೆ. ರಾಜ್ಯದ ಬಳ್ಳಾರಿ, ರಾಯಚೂರು, ಗದಗ, ಅಂತೂರು, ಬೆಂತೂರು, ಚಿತ್ರದುರ್ಗ, ಆಂಧ್ರಪ್ರದೇಶಕ್ಕೆ ಹೊಂದಿಕೊಂಡ ಗ್ರಾಮಗಳಿಂದ ಮೆಣಸಿನಕಾಯಿ ಬೆಳೆ ಮಾರಾಟಕ್ಕೆ ತರಲಾಗುತ್ತಿದೆ. ಹಿಂದಿನ ವರ್ಷ ಮೆಣಸಿನಕಾಯಿ ಬೆಲೆ ಕ್ವಿಂಟಾಲ್ಗೆ 40 ರಿಂದ 50 ಸಾವಿರ ರೂ.ವರೆಗೆ ಇತ್ತು. ಹೀಗಾಗಿ, ಮೆಣಸಿನಕಾಯಿಯನ್ನು ನೀರಾವರಿಯಲ್ಲೂ ಬೆಳೆಯಲು ಶುರು ಮಾಡಿದ್ದಾರೆ. ಪರಿಣಾಮ ಮಾರುಕಟ್ಟೆಗೆ ಪ್ರಸಕ್ತ ಸಾಲಿನಲ್ಲಿ ವಿಪರೀತ ಮೆಣಸಿನಕಾಯಿ ಟೆಂಡರ್ಗೆ ಬಂದಿದೆ. ಬೆಳೆಯು ಹೆಚ್ಚು ಆವಕವಾಗುತ್ತಿರುವುದರಿಂದ ಬೆಲೆಯಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದೆ.
ಮಾರುಕಟ್ಟೆ ಶುಲ್ಕ ಸಂಗ್ರಹ ಇಳಿಕೆ: ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಬೆಲೆ ಹಾಗೂ ವಹಿವಾಟು ಆಧರಿಸಿ ಶುಲ್ಕ ಸಂಗ್ರಹವಾಗುತ್ತದೆ. ಮೆಣಸಿನಕಾಯಿ ಬೆಲೆ ಇಳಿಮುಖವಾದ ಪರಿಣಾಮ ಮಾರುಕಟ್ಟೆಯ ಶುಲ್ಕ ಸಂಗ್ರಹಕ್ಕೂ ಹೊಡೆತ ಬಿದ್ದಿದೆ. 2024-25ರಲ್ಲಿ 28 ಕೋಟಿ ರೂ. ಶುಲ್ಕ ಸಂಗ್ರಹ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಕೇವಲ 12.40 ಕೋಟಿ ರೂ. ಸಂಗ್ರಹವಾಗಿದೆ. ಗುರಿಯ ಶೇ. 46ರಷ್ಟು ಸಂಗ್ರಹವಾಗಿದ್ದು, ಶೇ. 50 ಗುರಿ ದಾಟದಿರುವುದರಿಂದ ಮಾರುಕಟ್ಟೆ ಸಮಿತಿ ಆದಾಯಕ್ಕೆ ದೊಡ್ಡ ನಷ್ಟವಾಗಿದೆ.
ದಶಕದ ಮೆಣಸಿನಕಾಯಿ ವಹಿವಾಟು ವಿವರ
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ದಶಕಗಳಿಂದ ಬರುತ್ತಿದ್ದೇನೆ. ಹಿಂದಿನ ವರ್ಷ ಕ್ವಿಂಟಾಲ್ಗೆ ದರ 50 ಸಾವಿರ ರೂ. ದಾಟಿತ್ತು. ಆದರೆ, ಈ ಬಾರಿ ಬೆಲೆ ಸಾಕಷ್ಟು ಕುಸಿದಿದೆ. ರೈತರ ಉತ್ಪಾದನೆಗೆ ತಕ್ಕಷ್ಟು ಹಾಗೂ ಖರ್ಚು ಮಾಡಿದ ಹಣವೂ ಮರಳದಂತಾಗಿದೆ. ಗುಣಮಟ್ಟದ ಕಾಯಿಗಳಿಗೆ ಉತ್ತಮ ಬೆಲೆಯಿದ್ದರೂ ರೈತರ ಸಂಕಷ್ಟ ತೀವ್ರವಾಗಿದೆ. | ಮಾಲರೆಡ್ಡಿ ರಾಯಚೂರು, ರೈತ ಹಿಂದಿನ ವರ್ಷದ ಬೆಲೆ ಈ ವರ್ಷ ಸಿಗದಂತಾಗಿದ್ದು, ಕೋಲ್ಡ್ ಸ್ಟೋರೇಜ್ಗಳಲ್ಲಿ ಶೇ. 30ರಷ್ಟು ಮೆಣಸಿನಕಾಯಿ ಚೀಲ ಉಳಿದಿವೆ. ಪರಿಣಾಮ ಪ್ರಸಕ್ತ ವರ್ಷದ ಉತ್ಪಾದನೆ ಹೆಚ್ಚಳ, ಹಳೆಯ ಮೆಣಸಿನಕಾಯಿ ಸಂಗ್ರಹವಿರುವುದು ಬೆಲೆ ಇಳಿಮುಖಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೆ, ಈ ಬಾರಿ ಗುಣಮಟ್ಟದ ಕೊರತೆಯಿದ್ದು, ಬಿಳಿಕಾಯಿಯ ಚೀಲಗಳ ಸಂಖ್ಯೆ ತೀವ್ರವಾಗಿದೆ. ಬ್ಯಾಡಗಿ ಮಾರುಕಟ್ಟೆಯಿಂದ ಮೆಣಸಿನಕಾಯಿ ರಫ್ತು ಜೋರಾಗಿದ್ದು, ತಪ್ಪು ವದಂತಿಗಳಿಗೆ ರೈತರು ಕಿವಿಗೊಡಬಾರದು. | ರಾಜು ಮೋರಗೇರಿ. ಖರೀದಿದಾರರು ಹಾಗೂ ಕೋಲ್ಡ್ ಸ್ಟೋರೇಜ್ ಮಾಲೀಕರು ಮಾರುಕಟ್ಟೆಗೆ ಮೆಣಸಿನಕಾಯಿ ಚೀಲಗಳ ಆವಕ ಹಿಂದಿಗಿಂತ ಈ ಬಾರಿ ಹೆಚ್ಚಿದೆ. ರೈತರು ಗುಣಮಟ್ಟದ ಮೆಣಸಿನಕಾಯಿ ತಂದಲ್ಲಿ ಹೆಚ್ಚು ದರ ಸಿಗಲಿದೆ. 2024-25ರಲ್ಲಿ 2 ಸಾವಿರ ಕೋಟಿ ರೂ. ವಹಿವಾಟು ನಡೆದಿದ್ದು, ಹಿಂದಿನ ವರ್ಷಕ್ಕಿಂತ ಸಾವಿರ ಕೋಟಿ ರೂ. ಕಡಿಮೆಯಾಗಿದೆ. ದರ ಇಳಿಕೆ ಕಾರಣ ಶುಲ್ಕ ಸಂಗ್ರಹ ಗುರಿ ತಲುಪಲು ಸಾಧ್ಯವಾಗಿಲ್ಲ. | ಡಾ. ಆದರ್ಶ ಡಿ.ಬಿ., ಎಪಿಎಂಸಿ ಕಾರ್ಯದರ್ಶಿ