ಕಲ್ಲಂಗಡಿಗೆ ಭಾರಿ ಡಿಮಾಂಡ್!

watermelon
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಪ್ರಸಕ್ತ ವರ್ಷ ಬೇಸಿಗೆ ಪ್ರಭಾವ ಈಗಾಗಲೇ ಕಾಣಲಾರಂಭಿಸಿದ್ದು, ಹಣ್ಣುಗಳಿಗೆ, ಹಣ್ಣುಗಳ ಪಾನೀಯಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಕಿರಿಮಂಜೇಶ್ವರ, ನಾಗೂರು, ನಾವುಂದ, ಕಂಬದಕೋಣೆ, ಹೇರಂಜಾಲು ಸಹಿತ ಮತ್ತಿತರ ಭಾಗಗಳಲ್ಲಿ ಹೆಚ್ಚು ಕಲ್ಲಂಗಡಿ ಬೆಳೆ ಬೆಳೆಯಲಾರಂಭಿಸಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಪ್ರದೇಶಗಳಲ್ಲಿ ಕಲ್ಲಂಗಡಿ ಬೆಳೆಯಲಾಗುತ್ತಿದೆ. 2024ರಲ್ಲಿ 147 ಎಕರೆ ಪ್ರದೇಶಗಳಲ್ಲಿ ಕಲ್ಲಂಗಡಿ ಕೃಷಿ ನಡೆದಿದ್ದು, ಈ ಬಾರಿ 183 ಎಕರೆ ಪ್ರದೇಶಗಳಿಗೆ ವಿಸ್ತರಣೆಗೊಂಡಿದೆ. ಬೈಂದೂರು ಹೋಬಳಿಯ ಬಹುಭಾಗ ಕಲ್ಲಂಗಡಿ ಬೆಳೆಯಲಾಗುತ್ತದೆ. ವಂಡ್ಸೆ, ಕುಂದಾಪುರ ಹೋಬಳಿಯ ಕೆಲವೇ ಪ್ರದೇಶಗಳಲ್ಲಿ ಮಾತ್ರ ಬೆಳೆಯುತ್ತಾರೆ. ಕಲ್ಲಂಗಡಿ ಬೆಳೆ ಹಲವು ರೈತರ ಜೀವನಾಧಾರವೂ ಆಗಿದೆ.

ಉತ್ತಮ ದರದ ನಿರೀಕ್ಷೆ

ಕಲ್ಲಂಗಡಿ ಹಣ್ಣು ಉತ್ತಮವಾಗಿ ಬೆಳೆಯಲು ಒಳ್ಳೆಯ ಬಿಸಿಲಿನ ಅಗತ್ಯವಿದೆ. ಕಳೆದ ವರ್ಷ ಒಳ್ಳೆಯ ಇಳುವರಿ ದೊರೆತಿದ್ದು, ಉತ್ತಮ ದರವೂ ಇತ್ತು. ಈ ಬಾರಿ ಆರಂಭದಲ್ಲಿ ಮೆಲೋಡಿ ಕೆ.ಜಿ.ಗೆ ಗದ್ದೆಯ ದರ 12 ರೂ. ತನಕವಿದ್ದು, ನಾಮಧಾರಿ ಹಣ್ಣು 15-16 ರೂ. ದರ ಸಿಗಲಿದೆ. ಮಾರುಕಟ್ಟೆ ಹಾಗೂ ಬೇಡಿಕೆ ಅನ್ವಯ ವ್ಯತ್ಯಾಸವಾಗಲಿದೆ ಎಂದು ರೈತರು ತಿಳಿಸಿದ್ದಾರೆ.

ಪ್ರದೇಶವಾರು ಬೆಳೆ ಮಾಹಿತಿ

ಬೈಂದೂರು ತಾಲೂಕಿನಲ್ಲಿ 183 ಎಕರೆ ಪ್ರದೇಶದಲ್ಲಿ ರೈತರು ಕಲ್ಲಂಗಡಿ ಬೆಳೆದಿದ್ದಾರೆ. ಈ ಪೈಕಿ ನಾಗೂರಿನಲ್ಲೇ 80 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದೆ. ಹೇರೂರಿನಲ್ಲಿ 25 ಎಕರೆ, ಹೆರಂಜಾಲು- 20 ಎಕರೆ, ಬಿಜೂರು- 15, ಉಪ್ಪುಂದ- 10, ಶಿರೂರು- 12, ನಾಡ- 6, ನಂದನವನ- 10 ಹಾಗೂ ಪಡುವರಿಯಲ್ಲಿ 5 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ. ಪ್ರತಿ ವರ್ಷವೂ ತಾಲೂಕಿನಲ್ಲಿ ಬೆಳೆಯುವ ಕಲ್ಲಂಗಡಿ ಹೊರಜಿಲ್ಲೆ ಸಹಿತ ಹೊರರಾಜ್ಯಗಳಿಗೂ ರಫ್ತಾಗುತ್ತದೆ.

ಹತ್ತು ವರ್ಷಗಳಿಂದ ಕಲ್ಲಂಗಡಿ ಬೆಳೆಯುತ್ತಿದ್ದು, ಈ ವರ್ಷ ಕಿರಿಮಂಜೇಶ್ವರದಲ್ಲಿ ಬೇರೆಯವರ ಜಾಗ ಲೀಸ್ ಪಡೆದು 3.5 ಎಕರೆ ಜಾಗದಲ್ಲಿ 1.5 ಎಕರೆ ನಾಮಧಾರಿ ತಳಿ, 2 ಎಕರೆಯಲ್ಲಿ ಮೆಲೋಡಿ ತಳಿ ಕಲ್ಲಂಗಡಿ ಬೆಳೆಯಲಾಗಿದೆ. ಒಂದು ತಳಿಯ ಸುಮಾರು 17 ಟನ್ ಕಲ್ಲಂಗಡಿ ಈಗಾಗಲೇ ಕಟಾವುಗೊಂಡಿದ್ದು, ಕೆ.ಜಿ.ಗೆ 17ರೂ.ನಂತೆ ಮಾರಾಟ ಮಾಡಲಾಗಿದೆ. ಶೀಘ್ರವೇ ಉಳಿದವೆಲ್ಲವೂ ಮಾರಾಟಗೊಳ್ಳಲಿವೆ. ಬೇಸಿಗೆ ಸಂದರ್ಭ ಮಾರುಕಟ್ಟೆಯಲ್ಲಿ ಬೇಡಿಕೆ ಸಿಗುವ ನಿರೀಕ್ಷೆಯಲ್ಲಿ ಮತ್ತೊಂದು ಹಂತದ ಬೆಳೆಗಾಗಿ ಇನ್ನೊಂದು ಎಕರೆಯಲ್ಲಿ ಕಳೆದ ವಾರ ಗಿಡ ಹಾಕಿರುವೆ. -ಸುಧಾ ಬಳೆಗಾರ್ ಹಳಗೇರಿ, ಕಲ್ಲಂಗಡಿ ಬೆಳೆಗಾರರು ಕಳೆದ ವರ್ಷ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಹಾಗೂ ಎಳನೀರಿಗೆ ಭಾರಿ ಬೇಡಿಕೆ ಇತ್ತು. ಆದ್ದರಿಂದ ಈ ಬಾರಿ ಕಲ್ಲಂಗಡಿ ಬೆಳೆಯುವ ಪ್ರದೇಶವೂ ವಿಸ್ತರಣೆಯಾಗಿದೆ. ಕಲ್ಲಂಗಡಿ ಬೆಳೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಹೆಕ್ಟೇರ್‌ಗೆ 20 ಸಾವಿರ ರೂ. ಮತ್ತು ಪ್ಲಾಸ್ಟಿಕ್ ಮಲ್ಚಿಂಗ್‌ಗೆ 16 ಸಾವಿರ ರೂ. ಸಹಾಯಧನ ಪ್ರತ್ಯೇಕವಾಗಿ ನೀಡಲಾಗುತ್ತಿದೆ. ತಾಲೂಕಿಗೆ ಪ್ರದೇಶ ವಿಸ್ತರಣೆಯಡಿ 10 ಹೆಕ್ಟೇರ್ ಗುರಿ ಇದೆ. ಈಗಾಗಲೇ 8 ಹೆಕ್ಟೇರ್ ಪ್ರದೇಶಕ್ಕೆ ಅರ್ಜಿ ಬಂದಿದ್ದು, ಸಹಾಯಧನ ನೀಡಲಾಗುತ್ತಿದೆ. ಪ್ಲಾಸ್ಟಿಕ್ ಮಲ್ಚಿಂಗ್‌ಗೆ 5 ಹೆಕ್ಟೇರ್ ಗುರಿಯಿದ್ದು ಅರ್ಹರು ಸಹಾಯಧನ ಪಡೆಯಬಹುದಾಗಿದೆ. ನಿಗದಿತ ಗುರಿಗಿಂತ ಹೆಚ್ಚುವರಿ ರೈತರ ಅರ್ಜಿಗಳು ಬಂದಲ್ಲಿ ಸಹಾಯಧನ ನೀಡಲು ಪ್ರತ್ಯೇಕ ಪ್ರಸ್ತಾವನೆಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು. -ನಿಧೀಶ್ ಕೆ.ಜೆ., ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ https://www.vijayavani.net/give-more-importance-to-self-development https://www.vijayavani.net/oxygen-concentrator-handed-over-to-hebri-trust

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net