

ಅವಿನಾಶ್ ಜೈನಹಳ್ಳಿ ಮೈಸೂರು
ಜಿಲ್ಲೆಯಲ್ಲಿ ಕಬ್ಬು ಬೇಸಾಯ ಪ್ರಮಾಣ ಇಳಿಕೆಯಾಗಿರುವುದರಿಂದ ಈ ಬಾರಿ ಕಬ್ಬು ಬೆಳೆದ ರೈತನಿಗೆ ಡಿಮಾಂಡ್ ಹೆಚ್ಚಿದ್ದು, ಆಲೆಮನೆಗಳಿಂದ ಬೇಡಿಕೆ ಹೆಚ್ಚಾದ ಪರಿಣಾಮ ಒಂದು ಟನ್ ಕಬ್ಬಿನ ಬೆಲೆ 3500 ರೂ.ರ ಗಡಿ ದಾಟಿದೆ.
ಕಾವೇರಿ ಮತ್ತು ಕಬಿನಿ ಅಚ್ಚುಕಟ್ಟು ಪ್ರದೇಶಗಳಾದ ತಿ. ನರಸೀಪುರ, ಎಚ್.ಡಿ. ಕೋಟೆ, ನಂಜನಗೂಡು, ಸಾಲಿಗ್ರಾಮ ಹಾಗೂ ಕೆ.ಆರ್. ನಗರ ತಾಲೂಕಿನಲ್ಲಿ ಹೆಚ್ಚು ಕಬ್ಬು ಬೆಳೆಯಲಾಗುತ್ತಿದ್ದು, 2023-24ನೇ ಸಾಲಿನಲ್ಲಿ ಮಳೆ ಅಭಾವದಿಂದ ಜಿಲ್ಲೆಯಲ್ಲಿ ಕಬ್ಬು ಬಿತ್ತನೆಯ ಪ್ರಮಾಣ ಇಳಿಕೆಯಾಗಿತ್ತು. ಪರಿಣಾಮ ಉತ್ಪಾದನೆ ಕೊರತೆಯಿಂದ ಆಲೆಮನೆಗಳಿಗೆ ಕಬ್ಬಿನ ಪೂರೈಕೆ ಕಡಿಮೆಯಾಗಿದ್ದು, ಆಲೆಮನೆಗಳ ಮಾಲೀಕರು ಹೆಚ್ಚು ಹಣ ನೀಡಿ ಕಬ್ಬು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ವರ್ಷ ಬರದಿಂದ ಕಬ್ಬು ಬೆಳೆದಿದ್ದ ರೈತರು ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಪಡೆಯದೆ ನಷ್ಟ ಅನುಭವಿಸಿದ್ದರು. ರಾಸಾಯನಿಕ ಗೊಬ್ಬರ, ಔಷಧ ಮತ್ತು ಕಾರ್ಮಿಕರ ಕೂಲಿ ಹೆಚ್ಚಾದಂತೆ ಕಬ್ಬು ಉತ್ಪಾದನಾ ವೆಚ್ಚವೂ ಹೆಚ್ಚಾಗುತ್ತಿದೆ. ಆದರೆ, ಸಕ್ಕರೆ ಕಾರ್ಖಾನೆಗಳು ಸರ್ಕಾರ ನಿಗದಿಪಡಿಸಿರುವ ಬೆಲೆಯಲ್ಲಿ ಕಬ್ಬನ್ನು ಖರೀದಿಸುತ್ತಿವೆ. ಇದು ಉತ್ಪಾದನಾ ವೆಚ್ಚಕ್ಕೆ ಸಮನಾದ ಪರಿಣಾಮ ಬಹುಪಾಲು ರೈತರು ಕಬ್ಬು ಬೇಸಾಯಕ್ಕೆ ನಿರಾಸಕ್ತಿ ತೋರಿದ್ದರು. ಅಳಿದುಳಿದ ಕೆಲ ರೈತರು ಬೆಳೆದಿದ್ದ ಕಬ್ಬಿಗೆ ಆಲೆಮನೆಗಳಿಂದ ಬೇಡಿಕೆ ಹೆಚ್ಚಾಗಿದ್ದು, ರೈತರಿಗೆ ಮುಂಗಡ ಹಣ ನೀಡಿ ಹೆಚ್ಚಿನ ಬೆಲೆಗೆ ಕಬ್ಬು ಖರೀದಿಸುತ್ತಿದ್ದಾರೆ. ಇದು ನಷ್ಟದಲ್ಲಿದ್ದ ಕಬ್ಬು ಬೆಳೆಗಾರರನ್ನು ಕೈಹಿಡಿದಂತಾಗಿದೆ.
2024ರ ಸಾಲಿನಲ್ಲಿ ಜಿಲ್ಲೆಯ ಆಲೆಮನೆಗಳು ರೈತರಿಂದ ಪ್ರತಿ ಟನ್ ಕಬ್ಬಿಗೆ 2 ಸಾವಿರದಿಂದ 2200 ರೂ. ನೀಡಿ ಖರೀದಿ ಮಾಡುತ್ತಿದ್ದವು. ಆದರೆ, ಕಬ್ಬು ಪೂರೈಕೆ ಕಡಿಮೆಯಾಗಿದ್ದರಿಂದ ಪ್ರತಿ ಟನ್ ಕಬ್ಬಿನ ಬೆಲೆ 3500 ರೂ.ಗೆ ಏರಿಕೆಯಾಗಿದೆ. ಈ ಹಣವನ್ನು ನೇರವಾಗಿ ರೈತರಿಗೆ ನೀಡುವ ಜತೆಗೆ, ಆಲೆಮನೆಯವರೇ ಕಬ್ಬು ಕಟಾವು ಮಾಡಿ ಕೊಂಡೊಯ್ಯುತ್ತಿದ್ದಾರೆ. ಇದರಿಂದ ರೈತರು ನಿರಾಯಾಸವಾಗಿ ಕಬ್ಬು ಮಾರಾಟ ಮಾಡುವಂತಾಗಿದೆ.
ಸಾಮಾನ್ಯವಾಗಿ ಕಬ್ಬು ವರ್ಷದ ಬೆಳೆಯಾಗಿದ್ದು, ಸಕ್ಕರೆ ಕಾರ್ಖಾನೆಗಳು ಕಬ್ಬು ನಾಟಿ ಮಾಡದ 12 ತಿಂಗಳ ಬಳಿಕ ರೈತರಿಂದ ಕಬ್ಬು ಖರೀದಿಸುತ್ತವೆ. ಆದರೆ, ಬಹುಪಾಲು ಕಾರ್ಖಾನೆಗಳು ಒಂದು ವರ್ಷದ ಬದಲಿಗೆ 16ರಿಂದ 17 ತಿಂಗಳ ಬಳಿಕ ಕಬ್ಬು ಕಟಾವು ಮಾಡುತ್ತವೆ. ಹೀಗೆ, ಮಾಡುವುದರಿಂದ ಕಬ್ಬಿನ ತೂಕ ಕಡಿಮೆಯಾಗುವುದಲ್ಲದೇ ಇಳುವರಿಯೂ ಕ್ಷೀಣಿಸುತ್ತದೆ. ಒಂದೂವರೆ ವರ್ಷದಲ್ಲಿ ಕಬ್ಬು ಒಂದೇ ಬೆಳೆ ಇರುವುದು ರೈತನಿಗೆ ಹೊರೆಯಾಗಿದೆ.
ಜಿಲ್ಲೆಯಲ್ಲಿ ಕಳೆದ ವರ್ಷ 1033 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತಾದರೂ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಸಿಕ್ಕಿರಲಿಲ್ಲ. ಪ್ರಸಕ್ತ ಸಾಲಿನಲ್ಲಿ 2215 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬಿತ್ತನೆಯ ಗುರಿ ಇಟ್ಟುಕೊಳ್ಳಲಾಗಿದೆ. ಆದರೆ, 1500 ಹೆಕ್ಟೇರ್‌ನಷ್ಟು ಮಾತ್ರ ಬಿತ್ತನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ಎಕರೆಯಲ್ಲಿ 60ರಿಂದ 65 ಟನ್ ಕಬ್ಬು ಬೆಳೆಯಬಹುದಾಗಿದ್ದು, ಇದಕ್ಕೆ 1ರಿಂದ 1.20 ಲಕ್ಷ ರೂ. ವೆಚ್ಚವಾಗಲಿದೆ. ಈ ಬೆಳೆಯನ್ನು ಜಮೀನಿನಲ್ಲಿ ವರ್ಷವಿಡೀ ಇಟ್ಟುಕೊಂಡು ರೋಗ ಬಾರದಂತೆ ಎಚ್ಚರಿಕೆ ವಹಿಸುವುದು ಸವಾಲಿನ ಕೆಲಸವೂ ಆಗಿದೆ. ಹೀಗಿದ್ದರೂ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ದೊರೆಯದ ಕಾರಣ ಬಹುಪಾಲು ರೈತರು ಕಬ್ಬು ಬೇಸಾಯದಿಂದ ವಿಮುಖರಾಗುತ್ತಿದ್ದಾರೆ.
ಆಲೆಮನೆಗಳಲ್ಲಿ ಕಬ್ಬು ಅರೆಯಲು ನಿತ್ಯವೂ 6ರಿಂದ 10 ಟನ್ ಕಬ್ಬು ಅಗತ್ಯವಿದೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ ಆಗದಿರುವ ಪರಿಣಾಮ ಹೆಚ್ಚು ಹಣ ನೀಡಿ ಕಬ್ಬು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ. ಒಮ್ಮೆ ಆಲೆಮನೆಗಳು ಕಬ್ಬು ಅರೆಯುವುದನ್ನು ನಿಲ್ಲಿಸಿದರೆ ಕಾರ್ಮಿಕರ ಕೊರತೆ ಸೃಷ್ಟಿಯಾಗಲಿದೆ. ಜತೆಗೆ ವೆಚ್ಚವೂ ಹೆಚ್ಚಾಗಲಿದೆ. ಹೀಗಾಗಿ, ಆಲೆಮನೆ ಮಾಲೀಕರು ಅನಿವಾರ್ಯವಾಗಿ ಹೆಚ್ಚಿನ ಬೆಲೆಗೆ ಕಬ್ಬು ಖರೀದಿಸಬೇಕಿದೆ.
ಮಳೆ ಕೊರತೆ ಮತ್ತು ಸೂಕ್ತ ಬೆಲೆ ಸಿಗದ ಹಿನ್ನೆಲೆ ಬಹುಪಾಲು ರೈತರು ಕಬ್ಬು ಬೆಳೆಯುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಆಲೆಮನೆಗಳಿಗೆ ಬೇಕಿರುವಷ್ಟು ಕಬ್ಬು ಸಿಗುತ್ತಿಲ್ಲ. ಒಮ್ಮೆ ಆಲೆಮನೆಯಲ್ಲಿ ಕಬ್ಬು ಅರೆಯುವುದನ್ನು ನಿಲ್ಲಿಸಿದರೆ, ಈಗಿರುವ ಕಾರ್ಮಿಕರು ಮತ್ತೆ ಸಿಗುವುದಿಲ್ಲ. ಪರಿಣಾಮ ಹೆಚ್ಚಿನ ಬೆಲೆಗೆ ಕಬ್ಬು ಖರೀದಿ ಮಾಡಲಾಗುತ್ತಿದೆ ಎಂದು ಆಲೆಮನೆ ಮಾಲೀಕರೊಬ್ಬರು ತಿಳಿಸಿದ್ದಾರೆ.
ಸರ್ಕಾರಗಳು ಕಬ್ಬಿಗೆ ನಿಗದಿ ಮಾಡಿರುವ ಬೆಲೆ ರೈತರನ್ನು ಶೋಷಣೆಗೆ ದೂಡಿವೆ. ಅಲ್ಲದೇ ಸಕ್ಕರೆ ಕಾರ್ಖಾನೆಗಳು ತೂಕ ಮತ್ತು ಕಟಾವಿನ ಸಂದರ್ಭ ಮೋಸ ಮಾಡುತ್ತಿವೆ. ಇದರಿಂದ ರೈತ ಕಬ್ಬು ಬೇಸಾಯಕ್ಕೆ ನಿರಾಸಕ್ತಿ ತೋರಿದ್ದಾನೆ. ಕಬ್ಬು ಉತ್ಪಾದನೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಆಲೆಮನೆಗಳು ಹೆಚ್ಚು ಬೆಲೆಗೆ ಕಬ್ಬು ಖರೀದಿಸುತ್ತಿರುವುದು ರೈತರಿಗೆ ಉಪಕಾರಿಯಾಗಿದೆ. ಅತ್ತಹಳ್ಳಿ ದೇವರಾಜು, ರಾಜ್ಯ ಸಂಘಟನಾ ಕಾರ್ಯದರ್ಶಿ ಕಬ್ಬು ಬೆಳೆಗಾರರ ಸಂಘ