

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಭೂಮಿಯ ಫಲವತ್ತತೆ ಹೆಚ್ಚಿಸುವ ಕುರಿ ಗೊಬ್ಬರಕ್ಕೆ ಈಗ ಭಾರಿ ಬೇಡಿಕೆ ಬಂದಿದೆ.
ವಾಣಿಜ್ಯ ಬೆಳೆಗಾರರು ರಾಸಾಯನಿಕ ಗೊಬ್ಬರ ಬಿಟ್ಟು ಕುರಿ ಗೊಬ್ಬರದ ಮೊರೆ ಹೋಗುತ್ತಿದ್ದು, ಕುರಿಗಾರರು ಹೇಳಿದಷ್ಟು ಹಣ ಕೊಟ್ಟು ಖರೀದಿಸತೊಡಗಿದ್ದಾರೆ.
ಮುಖ್ಯವಾಗಿ ಅಡಕೆ, ತೆಂಗು, ಪೇರಲ ಮತ್ತಿತರ ತೋಟಗಾರಿಕೆ ಬೆಳೆಗಾರರು ಗಿಡಗಳು ಹೆಚ್ಚಿನ ಫಲ ನೀಡಬೇಕಾದರೆ ಕುರಿ ಗೊಬ್ಬರ ಬಳಕೆಯೇ ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಕುರಿ ಹಾಲಿನಲ್ಲಿ ಔಷಧದ ಗುಣ ಹಾಗೂ ಪೌಷ್ಟಿಕಾಂಶ ಇರುವಂತೆ ಅದರ ಗೊಬ್ಬರದಲ್ಲೂ ಅಧಿಕ ಸಾರ, ಸತ್ವ ಇರುತ್ತದೆ ಎಂಬುದು ರೈತರ ಅಭಿಪ್ರಾಯ.
ತಾಲೂಕಿನಲ್ಲಿ 1.38 ಲಕ್ಷ ಕುರಿ ಹಾಗೂ ಮೇಕೆಗಳಿವೆ. ಅಂದಾಜು 18 ಸಾವಿರ ಕುರಿಗಾರರಿದ್ದಾರೆ. ಹೀಗಾಗಿ, ಇಲ್ಲಿ ಭಾರಿ ಪ್ರಮಾಣದಲ್ಲಿ ಕುರಿ ಗೊಬ್ಬರ ಉತ್ಪನ್ನವಾಗುತ್ತದೆ. ಕುರಿ ವಿವಿಧ ಸೊಪ್ಪು, ತೊಪ್ಪಲು ತಿನ್ನುವುದರಿಂದ ಅದರಲ್ಲಿನ ಔಷಧದ ಗುಣ ಮತ್ತು ಅಗತ್ಯ ಪೋಷಕಾಂಶ, ಹೆಚ್ಚಿನ ಸಾರ-ಸಾಂದ್ರತೆ ಕುರಿ ಗೊಬ್ಬರದಲ್ಲಿರುತ್ತದೆ. ಬೆಳೆಗಳಿಗೆ ಈ ಗೊಬ್ಬರ ಹಾಕುವುದರಿಂದ ಈ ಎಲ್ಲ ಅಂಶ ಲಭ್ಯವಾಗುತ್ತದೆ ಎಂಬ ನಂಬಿಕೆ ರೈತರದು.
ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ ಭಾಗದಿಂದಲೂ ರೈತರು ಕುರಿ ಗೊಬ್ಬರ ಖರೀದಿಗೆಂದು ರಾಣೆಬೆನ್ನೂರ ತಾಲೂಕಿಗೆ ಬರುತ್ತಿದ್ದಾರೆ. ಆದರೆ, ಬೇಡಿಕೆಗೆ ತಕ್ಕಷ್ಟು ಗೊಬ್ಬರ ಲಭ್ಯವಾಗದಿದ್ದರಿಂದ ಕುರಿ ಗೊಬ್ಬರದ ಬೆಲೆ ಪ್ರತಿ ವರ್ಷ ಏರುತ್ತಲೇ ಇದೆ. ಮೊದಲು 2500 ರೂ.ನಿಂದ 3100 ರೂ.ಗೆ ಸಿಗುತ್ತಿದ್ದ ಒಂದು ಟ್ರಾೃಕ್ಟರ್ ಗೊಬ್ಬರ ಈಗ 5ರಿಂದ 6 ಸಾವಿರ ರೂ.ಗೆ ತಲುಪಿದೆ. ಬೆಲೆ ದುಪ್ಪಟ್ಟಾದರೂ ಕುರಿ ಗೊಬ್ಬರ ಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಸದ್ಯ ತಾಲೂಕಿನಲ್ಲಿ ಮುಂಗಡ ಬುಕಿಂಗ್ ವ್ಯವಸ್ಥೆ ಚಾಲ್ತಿಯಲ್ಲಿದೆ. ರೈತರು ಕುರಿಗಾರರಿಗೆ ಮುಂಗಡ ಪಾವತಿಸಿ ಗೊಬ್ಬರ ಖರಿದೀಸಲು ಮುಂದಾಗಿದ್ದಾರೆ. ಹೀಗಾಗಿ, ಈ ಭಾಗದ ಕುರಿಗಾಹಿಗಳು ಫುಲ್ ಖುಷ್ ಆಗಿದ್ದಾರೆ.
ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಿಗೆ ರಾಸಾಯನಿಕ ಮತ್ತು ತಿಪ್ಪೆ ಗೊಬ್ಬರಕ್ಕಿಂತ ಕುರಿ ಗೊಬ್ಬರ ಉಪಯೋಗಿಸುವುದೇ ಉತ್ತಮ. ನಾನು ಪ್ರತಿ ವರ್ಷ ಅಡಕೆ ಸೇರಿ ಇತರ ಬೆಳೆಗೆ ಇದನ್ನೇ ಹಾಕುತ್ತೇನೆ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚುವ ಜತೆಗೆ ಉತ್ತಮ ಇಳುವರಿ ಕೂಡ ಬರುತ್ತದೆ.i ಸಂತೋಷಪ್ಪ ಕೆ.ಎಸ್., ಅಡಕೆ ಬೆಳೆಗಾರ ಕುರಿ ಸಾಕಣೆ ಇತ್ತೀಚಿನ ದಿನಗಳಲ್ಲಿ ಕಷ್ಟದ ಕಾಯಕವಾಗಿದೆ. ಇತ್ತೀಚೆಗೆ ಮಳೆ ಕಮ್ಮಿಯಾಗುತ್ತಿದ್ದು, ಇನ್ನೊಂದೆಡೆ ಹಳ್ಳ ಕೊಳ್ಳದ ಬದಿ ಹಾಗೂ ಬೀಳು ಬಿದ್ದ ಜಾಗಗಳು ತೋಟಗಳಾಗಿ ಮಾರ್ಪಟ್ಟಿವೆ. ಇದರಿಂದಾಗಿ ಕುರಿ ಮೇಯಿಸಲು ಸ್ಥಳವಿಲ್ಲದಂತಾಗಿದೆ. ಈಗ ಕುರಿ ಗೊಬ್ಬರಕ್ಕೆ ಉತ್ತಮ ಬೆಲೆ ಇರುವುದರಿಂದ ನಮಗೆ ಸ್ವಲ್ಪ ಅನುಕೂಲವಾಗಿದೆ. ಎಲ್ಲೆಲ್ಲೋ ಹೋಗಿ ಕುರಿ ಮೇಯಿಸಿಕೊಂಡು ಬರುತ್ತಿದ್ದೇವೆ.i ನಿಂಗಪ್ಪ, ಕುರಿಗಾಹಿ ರಾಣೆಬೆನ್ನೂರ